

ಬೆಂಗಳೂರು: ನಿನ್ನೆ (ಮೇ.18) ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 17ನೇ ಆವೃತ್ತಿಯ ಅತ್ಯಧ್ಭುತ ಅಭಿಮಾನಿಗಳನ್ನು ಹೊಂದಿರುವ ಎರಡು ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ರೋಚಕ ಪಂದ್ಯದಲ್ಲಿ 27 ರನ್ಗಳಿಂದ ಆರ್ಸಿಬಿ ಭರ್ಜರಿ ಜಯ ಗಳಿಸಿತು. ಈ ಐತಿಹಾಸಿಕ ಗೆಲುವು ಸ್ಟೇಡಿಯಂನಲ್ಲಿ ಕುಳಿತ್ತಿದ್ದ ಬೆಂಗಳೂರು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಈ ಮ್ಯಾಚ್ನಲ್ಲಿ ಯಾವುದೇ ಕಾರಣಕ್ಕೂ ಆರ್ಸಿಬಿ ಸಿಎಸ್ಕೆ ತಂಡವನ್ನು ಮಣಿಸಿ, ಪ್ಲೇಆಫ್ ಹೋಗಲು ಸಾಧ್ಯವೇ ಇಲ್ಲ ಎಂದು ಟೀಕಾಕಾರರು ಅಪಹಾಸ್ಯ ಮಾಡಿದ್ದರು. ಆದರೆ, ಇದೀಗ ಅವರೆಲ್ಲರ ಲೆಕ್ಕಾಚಾರ ತಲೆಕೆಳಗಾಗಿದೆ.
ನಿನ್ನೆ ಸಿಎಸ್ಕೆ ವಿರುದ್ಧದ ರೋಚಕ ಪಂದ್ಯದಲ್ಲಿ ಆರ್ಸಿಬಿ ಸತತ ಗೆಲುವು ಮಾತ್ರ ದಾಖಲಿಸಲಿಲ್ಲ. ಬದಲಿಗೆ ಐತಿಹಾಸಿಕ ಜಯವನ್ನು ಗಳಿಸಿ, ಕ್ರಿಕೆಟ್ ಪ್ರಿಯರ ಹುಬ್ಬೇರುವಂತೆ ಮಾಡಿತು. ಈ ಹಿಂದೆ ಇದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಹೀನಾಯ ಸೋಲುಗಳ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿತ್ತು. ಆಗ ತಂಡದ ಪರ ಸ್ಪೋಟಕ ಬ್ಯಾಟಿಂಗ್ ಮಾಡಿದ್ದ ವಿಲ್ ಜ್ಯಾಕ್ಸ್ಗೆ ಒಂದು ನೇರ ಪ್ರಶ್ನೆಯನ್ನು ಕೇಳಲಾಗಿತ್ತು. ಆರ್ಸಿಬಿಗೆ ಪ್ಲೇಆಫ್ ಪ್ರವೇಶ ಕೇವಲ ಕನಸು ಎಂಬುದು ಖಚಿತವಾಗಿದೆ. ಎಲ್ಲರೂ ಇದನ್ನೇ ಹೇಳ್ತಿದ್ದಾರೆ. ಈ ಬಗ್ಗೆ ನೀವೇನು ಹೇಳ್ತೀರಾ ಎಂದಿದ್ದರು.
ಕಳೆದ ಎಸ್ಆರ್ಎಚ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್ಸಿಬಿ ಪ್ಲೇ-ಆಫ್ ಬಗ್ಗೆ ಭವಿಷ್ಯ ನುಡಿದಿದ್ದ ವಿಲ್ ಜ್ಯಾಕ್ಸ್, “ಹೊಸ ಬಾಲ್ನೊಂದಿಗೆ ವಿಕೆಟ್ ತೆಗೆಯಲು ಸತತ ಪ್ರಯತ್ನಗಳನ್ನು ಮಾಡಿದ್ದೇವೆ. ಖಂಡಿತವಾಗಿ ಅದೆಲ್ಲವೂ ನಮಗೆ ಫಲಿಸಲಿದೆ. ನಿಮಗೆ ಗೊತ್ತಿಲ್ಲ, ನಾವು ಮುಂದಿನ ಪಂದ್ಯಗಳನ್ನು ಗೆದ್ದರೆ, ಬಳಿಕ ಏನೆಲ್ಲಾ ನಡೆಯುತ್ತದೆ ಎಂಬುದನ್ನು ನೀವು ಊಹಿಸಲು ಸಹ ಸಾಧ್ಯವಿಲ್ಲ” ಎಂದು ಟೀಕಾಕಾರರಿಗೆ ಖಡಕ್ ಉತ್ತರ ರವಾನಿಸಿದ್ದರು. ಅಂದೇ ಆರ್ಸಿಬಿ ಪ್ಲೇಆಫ್ ಎಂಟ್ರಿ ಬಗ್ಗೆ ವಿಲ್ ನುಡಿದಿದ್ದ ಭವಿಷ್ಯ ಇಂದು ಈಡೇರಿದ್ದು, ಇದೀಗ ಮತ್ತೊಮ್ಮೆ ಅವರ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಬಗ್ಗೆ ಬೆಂಗಳೂರು ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದು, ವ್ಯಾಪಕವಾಗಿ ಧನ್ಯವಾದ ತಿಳಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಹೋಗುವುದು ಡೌಟ್, ಅವರ ಯೋಗ್ಯತೆಗೆ ಈ ಬಾರಿಯೂ ಪ್ಲೇಆಫ್ ಪ್ರವೇಶಿಸಲು ಸಾಧ್ಯವಿಲ್ಲ. ಇಂತಹ ಕಳಪೆ ಪ್ರದರ್ಶನ ನೀಡುವವರು ಕಪ್ ಇರಲಿ, ಲೀಗ್ನಿಂದಲೇ ಹೊರಗುಳಿಯುತ್ತಾರೆ ಎಂದು ಟೀಕೆ ಮಾಡಿದ್ದವರಿಗೆ ಇದೀಗ ವಿಲ್ ಜ್ಯಾಕ್ಸ್ ಅವರ ಭವಿಷ್ಯವಾಣಿ ಭಾರೀ ಮುಖಭಂಗ ಉಂಟುಮಾಡಿದೆ,(ಏಜೆನ್ಸೀಸ್).