ಹಾರ್ದಿಕ್ ಪಾಂಡ್ಯ ಮುಂಬೈ ಸೇರುವುದು ಬಹುತೇಕ ಖಚಿತ; ಗುಜರಾತ ಕ್ಯಾಪ್ಟನ್ಸಿ ರೇಸ್​ನಲ್ಲಿ ಈ ಇಬ್ಬರು ಆಟಗಾರರು

Gujarat Titans
Published on

ಮುಂಬೈ: ಮುಂಬರುವ ಐಪಿಎಲ್​ ಟೂರ್ನಿಗೆ ಈಗಾಗಲೇ ಸಿದ್ದತೆ ಆರಂಭವಾಗಿದ್ದು, ಮಿನಿ ಹರಾಜಿಗಾಗಿ ತಂಡಗಳು ಭರ್ಜರಿ ಸಿದ್ದತೆ ನಡೆಸುತ್ತಿವೆ. ಇದರ ನಡುವೆ ಕೆಲ ಶಾಕಿಂಗ್ ವಹಿವಾಟು ಕೂಡ ನಡೆಯುತ್ತಿದೆ. ಫ್ರಾಂಚೈಸಿಗಳು ಹರಾಜಿಗು ಮೊದಲು ಟ್ರೇಡ್ ಮೂಲಕ ಆಟಗಾರರನ್ನು ವಿನಿಮಯ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿವೆ. 

ಈ ವಿಚಾರವಾಗಿ ಇದೀಗ ಮುಂಬೈ ಇಂಡಿಯನ್​ ತಂಡವು ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅವರನ್ನು ಮರಳಿ ಕರೆತರಲು ಮುಂದಾಗಿದೆ ಎಂದು ವರದಿಯಾಗಿದೆ. ಗುಜರಾತ್‌ ಟೈಟಾನ್ಸ್​ನೊಂದಿಗೆ ಮುಂಬೈ 15 ಕೋಟಿ ರೂ. ಒಪ್ಪಂದದ ಮೂಲಕ ಪಾಂಡ್ಯ ಮತ್ತೊಮ್ಮೆ ಮುಂಬೈ ಇಂಡಿಯನ್ಸ್​ ತಂಡ ಸೇರಲಿದ್ದಾರ ಎಂಬ ಸುದ್ದಿಗೆ ಈಗ ಪುಷ್ಠಿ ಸಿಕ್ಕಿದೆ.

ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ ಕೊನೆಯ ಕೆಲವು ವೀಡಿಯೊಗಳಲ್ಲಿ ಹಾರ್ದಿಕ್ ಪಾಂಡ್ಯ ಎಲ್ಲಿಯೂ ಕಂಡುಬರುತ್ತಿಲ್ಲ. ಮಿನಿ ಹರಾಜು ಮತ್ತು ಐಪಿಎಲ್ 2024 ಕ್ಕಿಂತ ಮುಂಚಿತವಾಗಿ ಜಿಟಿ ಹಾರ್ದಿಕ್ ಅವರ ವಿಡಿಯೋವನ್ನು ಡಿಲೀಟ್ ಮಾಡಿದೆ.

ಜಿಟಿಯ ಸಾಮಾಜಿಕ ಮಾಧ್ಯಮ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ಇತ್ತೀಚಿನ ವಿಡಿಯೋಗಳು ಶುಭ್​ಮನ್ ಗಿಲ್, ಮ್ಯಾಥ್ಯೂ ವೇಡ್, ರಶೀದ್ ಖಾನ್ ಮತ್ತು ಮುಂತಾದವರನ್ನು ಮಾತ್ರ ಒಳಗೊಂಡಿವೆ. ಆದಾಗ್ಯೂ, ಈ ವೀಡಿಯೊಗಳಲ್ಲಿ ಹಾರ್ದಿಕ್ ಪಾಂಡ್ಯ ಅವರ ಯಾವುದೇ ಕುರುಹು ಇಲ್ಲ. ಈ ಮೂಲಕ ಅವರು ಮುಂಬೈ ಸೇರುವುದು ಬಹುತೇಕ ಖಚಿತವಾಗಿದೆ.

ಯಾರ ಹೆಗಲಿಗೆ ನಾಯಕತ್ವದ ಹೊಣೆ

ಒಂದು ವೇಳೆ ಹಾರ್ದಿಕ್​ ಪಾಂಡ್ಯ ಗುಜರಾತ್​ ಟೈಟಾನ್ಸ್​ ತೊರೆದರೆ ತಂಡದ ನಾಯಕತ್ವವನ್ನು ಶುಭಮನ್​ ಗಿಲ್​ ಅಥವಾ ರಶೀದ್​ ಖಾನ್​ ವಹಿಸಲಿದ್ದಾರೆ ಎಂದು ಹೇಳಲಾಗಿದೆ. ಭವಿಷ್ಯದ ದೃಷ್ಟಿಯಿಂದ ಈ ಇಬ್ಬರ ಪೈಕಿ ಒಬ್ಬರಿಗೆ ತಂಡದ ಸಾರಥ್ಯವನ್ನು ವಹಿಸಬಹುದು ಎಂದು ಅಂದಾಜಿಸಲಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಫ್ರಾಂಚೈಸಿ ಕೆಲವು ಆವೃತ್ತಿಗಳಿಗೆ ರಶೀದ್ ಅವರಿಗೆ ನಾಯಕತ್ವ ನೀಡಿ, ಉಪನಾಯಕತ್ವವನ್ನು ಗಿಲ್‌ಗೆ ಹಸ್ತಾಂತರಿಸುವ ಸಾಧ್ಯತೆಯಿದೆ. ಇದರಿಂದ ಗಿಲ್​ಗೆ ತನ್ನನ್ನು ನಾಯಕತ್ವದ ಪಾತ್ರಕ್ಕೆ ಹೊಂದಿಸಿಕೊಳ್ಳಲು ಸಾಕಷ್ಟು ಸಮಯ ಕೂಡ ಸಿಗಲಿದೆ. ನಂತರ ಗಿಲ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಬಹುದು. ಈ ಇಬ್ಬರನ್ನು ಹೊರತುಪಡಿಸಿ, ಪ್ರಸ್ತುತ ಸೆಟಪ್‌ನಲ್ಲಿ ತಂಡವು ಬೇರೆ ಯಾವುದೇ ನಾಯಕತ್ವದ ಆಯ್ಕೆಯನ್ನು ಹೊಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net