

ತಿರುವನಂತಪುರಂ: ಇಲ್ಲಿನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಎರಡನೇ ಟಿ-20 ಪಂದ್ಯಕ್ಕೆ ಮಳೆ ಭೀತಿ ಶುರುವಾಗಿದ್ದು, ಶನಿವಾರ ಸುರಿದ ಮಳೆಯಿಂದಾಗಿ ಕ್ರೀಡಾಂಗಣ ಕೆರೆಯಂತಾಗಿದೆ.
ತುಂತುರು ಮಳೆಯಿಂದಾಗಿ ಉಭಯ ತಂಡದ ಆಟಗಾರರು ಸರಿಯಾಗಿ ಅಭ್ಯಾಸ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಒಂದು ವೇಳೆ ಮಳೆ ಹೀಗೆ ಮುಂದುವರೆದರೆ ಪಂದ್ಯ ರದ್ದಾಗುವ ಸಾಧ್ಯತೆ ದಟ್ಟವಾಗಿದೆ.
ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯಕ್ಕೆ ಮಳೆ ದೊಡ್ಡ ಸಮಸ್ಯೆ ತಂದಿರುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನ ತಿರುವನಂತಪುರದಲ್ಲಿ ನಡೆಯಬೇಕಿದ್ದ ಎಲ್ಲಾ ಅಭ್ಯಾಸ ಪಂದ್ಯಗಳು ಕೂಡ ಮಳೆಯಿಂದಾಗಿ ರದ್ದುಗೊಂಡಿದ್ದವು.
ಇದೀಗ ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯಕ್ಕೂ ಇದೇ ಸ್ಥಳದಲ್ಲಿ ಮಳೆ ದೊಡ್ಡ ತಲೆನೋವಿಗೆ ಕಾರಣವಾಗಿದೆ. ಅಕ್ಯುವೆದರ್‌ನ ಹವಾಮಾನ ಮುನ್ಸೂಚನೆಯ ಪ್ರಕಾರ, ಇಂದು ಶೇ. 25 ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.