

ಮುಂಬೈ: ಆರ್ಥಿಕ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಮುಂಬೈ ಮೇಲೆ ನಡೆದ ವಿನಾಶಕಾರಿ ಭಯೋತ್ಪಾದಕ ದಾಳಿ ಭಾರತ ಮಾತ್ರವಲ್ಲದೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. 10 ಮಂದಿ ಭಯೋತ್ಪಾದಕರ ಈ ಸಂಘಟಿತ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದರು.
ಲಷ್ಕರ್-ಎ-ತೋಯ್ಬಾ (LET) ಸಂಘಟನೆಯ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 166 ಮಂದಿ ಮೃತಪಟ್ಟು, 300ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ದುರಂತ ಸಂಭವಿಸಿ 15 ವರ್ಷಗಳು ಕಳೆದರೂ ಸಹ ಘಟನೆಯ ಕರಾಳತೆ, ಮೃತಪಟ್ಟವರ ನೆನಪು, ಕುಟುಂಬಗಳ ರೋಧನೆ ಇನ್ನು ಜೀವಂತವಾಗಿದೆ.
ಭಾರತೀಯರು, ಯರೋಪಿಯನ್ನರು ಹಾಗೂ ಯಹೂದಿಗಳು ಹೆಚ್ಚಾಘಿ ಭೇಟಿ ನೀಡುವ ತಾಜ್, ಒಬೆರಾಯ್, ಛತ್ರಪತಿ ಶಿವಾಜಿ ರೈಲು ನಿಲ್ದಾಣ, ನಾರಿಮನ್ ಹೌಸ್ನಲ್ಲಿ ಗರಿಷ್ಠ ಜನಸಂದಣಿ ಇರುವ ಬಗ್ಗೆ ಸಮೀಕ್ಷೆ ನಡೆಸಿದ ಉಗ್ರರು ಯೋಜನೆ ರೂಪಿಸಿ ದಾಳಿ ನಡೆಸಿದ್ದರು. ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ 10 ಉಗ್ರರ ಪೈಕಿ 9 ಮಂದಿಯನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದ್ದವು.
ಈ ಪೈಕಿ ಬದುಕುಳಿದಿದ್ದ ಓರ್ವ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ಗೆ 2010ರಲ್ಲಿ ಮರಣದಂಡನೆ ವಿಧಿಸಿ 2012ರಲ್ಲಿ ಗಲ್ಲಿಗೇರಿಸಲಾಗಿತ್ತು. ಈ ದುರಂತ ಭಯೋತ್ಪಾದನಾ ದಾಳಿಯ 15ನೇ ವಾರ್ಷಿಕೋತ್ಸವವನ್ನು ಗುರುತಿಸುವ ಮೂಲಕ ಇಸ್ರೇಲ್ ಸರ್ಕಾರವು ಲಷ್ಕರ್-ಎ-ತೋಯ್ಬಾ (LET) ಸಂಘಟನೆಯನ್ನು ಭಯೋತ್ಪಾದಕಾ ಸಂಘಟನೆ ಎಂದು ಘೋಷಿಸಿದೆ.