

ನವದೆಹಲಿ: ವುಮೆನ್ಸ್ ಪ್ರೀಮಿಯರ್ ಲೀಗ್ (WPL) 2024ರಲ್ಲಿ ಸೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂತಿಮ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿತು. ಆರ್‌ಸಿಬಿ ವನಿತೆಯರ ಗೆಲುವಿಗೆ ಅಭಿಮಾನಿಗಳಲ್ಲಿ ಹರ್ಷೋದ್ಘಾರ ಮೂಡಿದ್ದು, ಐತಿಹಾಸಕ ಗೆಲುವಿಗೆ ಗಣ್ಯರು ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವಕ್ಕೆ ಸಂಭ್ರಮದ ತೆರೆ
ಆರ್‌ಸಿಬಿ ಗೆಲುವು ದಾಖಲಿಸುತ್ತಿದ್ದಂತೆ ಎಲ್ಲೆಲ್ಲೂ ಸಂಭ್ರಮ ಜೋರಾಗಿದ್ದು, ಅಭಿಮಾನಿಗಳು ವಿಶೇಷ ರೀತಿಯಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದ ಆರ್‌ಸಿಬಿ ತಂಡದ ನಾಯಕಿ ಸೃತಿ ಮಂದಾನಗೆ ವಿಡಿಯೋ ಕಾಲ್ ಮಾಡಿದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಆರ್‌ಸಿಬಿ ಪುರುಷರ ಟೀಮ್ನ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೃತಿ ಹಾಗೂ ತಂಡಕ್ಕೆ ವಿಶೇಷ ಅಭಿನಂದನೆ ತಿಳಿಸಿದರು.
ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವನಿತೆಯರ ತಂಡಕ್ಕೆ ದಿಗ್ಗಜರು ಕೂಡ ಅಭಿನಂದನೆ ತಿಳಿಸಿದ್ದು, ಮುಂಬರುವ ಐಪಿಎಲ್ 2024ರಲ್ಲಿ ಪುರುಷರ ತಂಡವು ಇದೇ ರೀತಿ ಟ್ರೋಫಿ ಗೆಲ್ಲಲಿದೆ ಎಂಬ ಭರವಸೆ ವ್ಯಕ್ತವಾಗುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 114 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ, 19.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 115 ರನ್ ಗಳಿಸುವ ಮೂಲಕ 8 ವಿಕೆಟ್ಗಳ ಸುಲಭ ಗೆಲುವು ದಾಖಲಿಸಿತು. ಈ ಮೂಲಕ ವ್ಯುಮೆನ್ಸ್ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತು. ಆರ್‌ಸಿಬಿ ಪರ ನಾಯಕಿ ಸ್ಮೃತಿ ಮಂದನಾ (31), ಸೋಫಿ ಡಿವೈನ್ (32), ಎಲ್ಲಿಸ್ ಪೆರ್ರಿ (35 ಅಜೇಯ) ಹಾಗೂ ರಿಚಾ ಘೋಷ್ (17 ಅಜೇಯ) ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ನಾಲ್ಕು ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಈ ನಾಲ್ವರು ಆಟಗಾರರು ಡೆಲ್ಲಿ ಬೌಲರ್ಗಳ ಬೆವರಿಳಿಸಿದರು.
ಡೆಲ್ಲಿ ಕ್ಯಾಪಿಟಲ್ ಪರ ಶಿಖಾ ಪಾಂಡೆ ಮತ್ತು ಮಿನ್ನು ಮನಿ ತಲಾ ಒಂದು ವಿಕೆಟ್ ಪಡೆದನ್ನು ಬಿಟ್ಟರೆ ಉಳಿದ ಯಾವೊಬ್ಬ ಬೌಲರ್ ಕೂಡ ಆರ್‌ಸಿಬಿ ಬ್ಯಾಟ್ಸ್ವುಮೆನ್ಗಳಿಗೆ ಸವಾಲಾಗಲೇ ಇಲ್ಲ.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 18.3 ಓವರ್ಗಳಲ್ಲಿ 113 ರನನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಶಫಾಲಿ ವರ್ಮಾ (27 ಎಸೆತ 44 ರನ್, 2 ಬೌಂಡರಿ, 3 ಸಿಕ್ಸರ್) ಹಾಗೂ ನಾಯಕಿ ಲ್ಯಾನಿಂಗ್ (23) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಉಳಿದಂತೆ ಯಾವೊಬ್ಬ ಬ್ಯಾಟ್ಸ್ವುಮೆನ್ ಕೂಡ ಆರ್‌ಸಿಬಿ ಬೌಲರ್ಗಳನ್ನು ಎದುರಿಸುವಲ್ಲಿ ವಿಫಲವಾದರು.
ಆರ್‌ಸಿಬಿ ಪರ ಮಿಂಚಿನ ಬೌಲಿಂಗ್ ದಾಳಿ ಮಾಡಿದ ಶ್ರೇಯಾಂಕ ಪಾಟೀಲ್ 4 ವಿಕೆಟ್ ಬಳಿಸಿದರೆ, ಮೊಲಿನೆಕ್ಸ್ 3 ವಿಕೆಟ್ ಹಾಗೂ ಆಶಾ ಶೋಭನಾ 2 ವಿಕೆಟ್ ಪಡೆದರು. ಆರ್‌ಸಿಬಿ ಬೌಲರ್ಗಳ ದಾಳಿಗೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್ ತರಗೆಲೆಗಳಂತೆ ವಿಕೆಟ್ ಒಪ್ಪಿಸುವ ಮೂಲಕ 113 ರನ್ಗಳ ಸಾಧಾರಣ ಮೊತ್ತಕ್ಕೆ ಕುಸಿದರು.