More

    ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವಕ್ಕೆ ಸಂಭ್ರಮದ ತೆರೆ

    ಗುರು ರಾಯರ ಪಟ್ಟಾಭಿಷೇಕ ಮತ್ತು ವರ್ಧಂತಿಯ ಸಂಸ್ಮರಣೆಗಾಗಿ ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವಕ್ಕೆ ಭಾನುವಾರ ಸಂಭ್ರಮದ ತೆರೆ ಬಿದ್ದಿತು.
    ಮಂತ್ರಾಲಯದ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಾಚರಣ ಸಮಿತಿ ಮತ್ತು ದಾವಣಗೆರೆಯ ಮಹೋತ್ಸವ ಸಮಿತಿ ವತಿಯಿಂದ ಮಾ. 11 ರಿಂದ 17ರ ವರೆಗೆ ಹಮ್ಮಿಕೊಂಡಿದ್ದ ಧಾರ್ಮಿಕ, ಸಾಂಸ್ಕೃತಿಕ ಹಬ್ಬಕ್ಕೆ ಬೆಣ್ಣೆನಗರಿಯ ಭಕ್ತರು ಸಾಕ್ಷಿಯಾದರು.
    ಏಳು ದಿನಗಳ ಕಾಲ ವಿಶೇಷ ಪೂಜೆ, ಅಭಿಷೇಕ, ಸುಪ್ರಭಾತ, ಹೋಮ, ಲಕ್ಷ ಪುಷ್ಪಾರ್ಚನೆ ಜತೆಗೆ ಪ್ರವಚನಗಳು ನಡೆದವು. ವಿವಿಧ ಮಠಾಧೀಶರ ಉಪಸ್ಥಿತಿಯು ಉತ್ಸವದ ಕಳೆಯನ್ನು ಹೆಚ್ಚಿಸಿತು. ಪಂಡಿತರಿಂದ ಜ್ಞಾನ ಕಾರ್ಯ ನಡೆದರೆ, ವಿವಿಧ ಕಲಾವಿದರು ಸಂಗೀತ, ನೃತ್ಯ ಇನ್ನಿತರ ಕಲಾ ಪ್ರಕಾರಗಳ ಮೂಲಕ ಎಲ್ಲರಿಗೆ ಗುರುರಾಯರ ಸ್ಮರಣೆ ಮಾಡಿಸಿದರು.
    ಪಲಿಮಾರು ಮಠದ ಶ್ರೀಗಳು ಏಳೂ ದಿನಗಳ ಕಾಲ ಉಪಸ್ಥಿತರಿದ್ದು ನಿತ್ಯವೂ ಅನುಗ್ರಹ ಸಂದೇಶ ನೀಡಿದರು. ಪೇಜಾವರ, ಅದಮಾರು, ಶ್ರೀ ವ್ಯಾಸರಾಜ, ಶ್ರೀ ಶ್ರೀಪಾದರಾಜ ಮಠದ ಗುರುಗಳು ಆಗಮಿಸಿ ರಾಯರ ಮಹಿಮೆಯನ್ನು ಕೊಂಡಾಡಿದರು.
    ಭರತನಾಟ್ಯ, ಕೊಳಲು, ವೀಣಾ ವಾದನ, ದಾಸವಾಣಿ ಜತೆಗೆ ವಿವಿಧ ಭಜನಾ ಮಂಡಳಿಯವರು ಉತ್ಸಾಹದಿಂದ ಪಾಲ್ಗೊಂಡು ಮಹೋತ್ಸವ ರಂಗೇರುವಂತೆ ಮಾಡಿದರು. ರಸಪ್ರಶ್ನೆ ಸ್ಪರ್ಧೆ, ದೀಪೋತ್ಸವ, ಸಾಮೂಹಿಕ ಲಕ್ಷ್ಮೀ ಶೋಭಾನ ಪಾರಾಯಣ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಉತ್ಸವದ ಎರಡನೇ ದಿನ ಭವ್ಯ ಶೋಭಾಯಾತ್ರೆ ನೆರವೇರಿತು.

    ಶ್ರೀನಿವಾಸ ಕಲ್ಯಾಣ ವೈಭವ : ಬೆಣ್ಣೆನಗರಿಯಲ್ಲಿ ಭಾನುವಾರ ತಿರುಪತಿ ತಿಮ್ಮಪ್ಪನ ದೇಗುಲದ ವೈಭವ ಅನಾವರಣಗೊಂಡಿತ್ತು. ವೇದಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಸಂಭ್ರಮ. ಈ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಸಭಾಂಗಣ ಕಾಲಿಡಲೂ ಜಾಗವಿಲ್ಲದಂತೆ ತುಂಬಿ ತುಳುಕಿತು. ನೂರಾರು ಮಂದಿ ನಿಂತುಕೊಂಡೇ ವೀಕ್ಷಿಸಿದರು. ಕಣ್ಣು ಹಾಯಿಸಿದಲ್ಲೆಲ್ಲ ಜನವೋ ಜನ.
    ಗಣಪತಿ ಪೂಜೆಯೊಂದಿಗೆ ಕಲ್ಯಾಣೋತ್ಸವಕ್ಕೆ ಚಾಲನೆ ದೊರೆಯಿತು. ಸ್ವಾಮಿಗೆ ಮಂಗಳ ಸ್ನಾನ ಮಾಡಿಸಿ ಮಂಗಳಾರತಿ ಬೆಳಗಲಾಯಿತು. ಅಭಿಷೇಕ, ಪುಣ್ಯಾಹವಾಚನ, ಒರಳುಪೂಜೆ, ಬಳೆ ಕೊಡಿಸುವ ಶಾಸ್ತ್ರ, ಮಾಂಗಲ್ಯ ಧಾರಣೆ ಎಲ್ಲವೂ ಶಾಸ್ತ್ರೋಕ್ತವಾಗಿ ನೆರವೇರಿದವು.
    ಸಭಾಂಗಣದಲ್ಲಿ ಗೋವಿಂದ ನಾಮ ಸ್ಮರಣೆ. ಹರೇ ಶ್ರೀನಿವಾಸ ಗುರೋ ರಾಘವೇಂದ್ರ, ಹರೇ ರಾಮ ಹರೇ ರಾಮ ಎಂದು ಭಗವಂತನಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
    ಕೌತಾಳಂ ಶ್ರೀ ಗುರು ಜಗನ್ನಾಥ ಸೇವಾ ಸಮಿತಿಯವರು ಕಲ್ಯಾಣೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಪಲಿಮಾರು ಶ್ರೀಗಳ ಉಪಸ್ಥಿತಿಯಲ್ಲಿ ಎಲ್ಲವೂ ಸಾಂಗವಾಗಿ ನೆರವೇರಿತು. ಕೆ. ಅಪ್ಪಣ್ಣಾಚಾರ್ಯ, ಸದಾನಂದ ಶಾಸ್ತ್ರಿಗಳು, ಸಂಪನ್ನ ಮುತಾಲಿಕ್, ಕಂಪ್ಲಿ ಗುರುರಾಜಾಚಾರ್ ಸೇರಿ ಮಹೋತ್ಸವ ಸಮಿತಿಯವರೆಲ್ಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts