ಅವಕಾಶ ಕೊಟ್ಟರೆ ರಾಜಕೀಯ ಇತಿಹಾಸ ಸೃಷ್ಟಿ

1 Min Read
ಅವಕಾಶ ಕೊಟ್ಟರೆ ರಾಜಕೀಯ ಇತಿಹಾಸ ಸೃಷ್ಟಿ

ದಾವಣಗೆರೆ : ಲೋಕಸಭೆ ಚುನಾವಣೆಯಲ್ಲಿ ನನಗೆ ಒಂದು ಅವಕಾಶ ನೀಡಿದರೆ ರಾಜಕೀಯ ಇತಿಹಾಸ ಸೃಷ್ಟಿಯಾಗುತ್ತದೆ. ರಾಜಕಾರಣಕ್ಕೆ ಬರಲು ನೂರಾರು ಯುವಕರಿಗೆ ಪ್ರೇರಣೆ ಸಿಗುತ್ತದೆ. ರಾಜಕೀಯ ಹೊಲಸು, ಕೊಳಕು ಎಂದುಕೊಂಡವರಲ್ಲಿ ಹೊಸ ಆಶಾಕಿರಣ ಮೂಡುತ್ತದೆಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ಕುಮಾರ್ ಹೇಳಿದರು.
 ಹರಪನಹಳ್ಳಿ ತಾಲೂಕಿನ ರಾಗಿಮಸಲವಾಡ, ಶಿಂಗ್ರಿಹಳ್ಳಿ, ಶಿಂಗ್ರಿಹಳ್ಳಿ ದೊಡ್ಡ ತಾಂಡಾ, ಲಕ್ಷ್ಮೀಪುರ ತಾಂಡಾ ಸೇರಿ ಹಲವೆಡೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
 ಜಿಲ್ಲೆಯಲ್ಲಿ ಕಳೆದ 30 ವರ್ಷಗಳಿಂದ ಆಡಳಿತ ನಡೆಸಿದವರು ಈಗಲೂ ಅದೇ ಭರವಸೆಗಳನ್ನೇ ಕೊಡುತ್ತಿದ್ದಾರೆ. ಅಧಿಕಾರ ಅನುಭವಿಸಿ, ಆಸ್ತಿ ಮಾಡಿ ಚುನಾವಣೆ ಬಂದಾಗ ಜನರ ಬಳಿ ಹೇಳಿದ್ದನ್ನೇ ಹೇಳುವವರು ನಿಮಗೆ ಬೇಕಾ? ಎಂದು ಪ್ರಶ್ನಿಸಿದರು.
 ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಪ್ರಚಾರಕ್ಕೆ ಹೋದ ಕಡೆಗಳಲ್ಲಿ ನೀರಾವರಿ ಯೋಜನೆ, ಕೈಗಾರಿಕಾ ಸ್ಥಾಪನೆ, ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ ಸೇರಿ ಇತರ ಅಭಿವೃದ್ಧಿ ವಿಚಾರಗಳ ಕುರಿತಂತೆ ಭರವಸೆ ನೀಡುವುದನ್ನು ನೋಡುತ್ತಿದ್ದು, ಅವರು ಅಧಿಕಾರದಲ್ಲಿದ್ದಾಗ ಯಾಕೆ ಈ ಕೆಲಸ ಮಾಡಲಿಲ್ಲ ಎಂದರು.
 ಬಡ ಕುಟುಂಬದ ಹಿನ್ನೆಲೆಯಿಂದ ಜನಸೇವೆಗೆಂದು ಜನಸಾಮಾನ್ಯನಾಗಿ ಬಂದಿರುವ ನನಗೆ ಚುನಾವಣೆಯಲ್ಲಿ ಬೆಂಬಲಿಸಿ. ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿ ದೇಶವೇ ದಾವಣಗೆರೆಯತ್ತ ತಿರುಗಿ ನೋಡುವಂತೆ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
 ನೂರಾರು ಬಡವರ ಮಕ್ಕಳಿಗೆ ಸಹಾಯ ಮಾಡಿದ್ದೇನೆ. ಕೇವಲ ಕೋಚಿಂಗ್ ಸೆಂಟರ್‌ವೊಂದರಿಂದಲೇ ಎಲ್ಲ ಮಕ್ಕಳಿಗೆ ಶಿಕ್ಷಣ ನೀಡಲು ಆಗದು. ಶಾಲಾ ಕಾಲೇಜುಗಳು ಹೆಚ್ಚಾಗಬೇಕು. ನಗರ ಪ್ರದೇಶಗಳಲ್ಲಿ ಸಿಗುವಂತ ಮೂಲಸೌಲಭ್ಯ, ಗುಣಮಟ್ಟದ ಶಿಕ್ಷಣ ಸೇರಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು. ಬಡವರ ಮಕ್ಕಳಿಗೆ ಸೂಕ್ತ ಸೌಲಭ್ಯ ಸಿಕ್ಕರೆ ಸಾಧನೆ ಮಾಡುತ್ತಾರೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ತಿಳಿಸಿದರು.
 ರಾಗಿಮಸಲವಾಡ ಗ್ರಾಮಕ್ಕೆ ಜಿ.ಬಿ. ವಿನಯ್ಕುಮಾರ್ ಅವರು ಆಗಮಿಸುತ್ತಿದ್ದಂತೆ ಜನರು ಅದ್ದೂರಿಯಾಗಿ ಬರಮಾಡಿಕೊಂಡರು. ನೂರಾರು ಸಂಖ್ಯೆಯಲ್ಲಿ ಆಗಮಿಸಿ ಜೈಕಾರ ಕೂಗಿದರು. ಈ ಬಾರಿ ಗ್ಯಾಸ್ ಸಿಲಿಂಡರ್‌ಗೆ ಮತವಣ್ಣ, ವಿನಯ್ ಕುಮಾರ್‌ಗೆ ನಮ್ಮ ಬೆಂಬಲವಣ್ಣ ಎಂಬ ಘೋಷಣೆ ಕೂಗಿದರು. ಗ್ರಾಮದ ಮುಖಂಡರಾದ ಚನ್ನಪ್ಪ, ದೊಡ್ಡೇಶ್, ಆನಂದ್, ಹನುಮಂತಪ್ಪ ಇತರರು ಇದ್ದರು.

See also  ಗಂಗೆಯನ್ನು ಭೂಮಿಗೆ ತಂದ ಛಲಗಾರ
Share This Article