ಸುಧಾರಣೆ ಸಾಕಾರಗೊಳ್ಳಲಿ: ಜನರು ಉದಾಸೀನ ಬಿಟ್ಟು ಮತದಾನ ಮಾಡುವುದು ಅಗತ್ಯ

ECI
Published on

ಹದಿನೆಂಟನೇ ಲೋಕಸಭೆ ಚುನಾವಣೆಯ ವೇಳಾಪಟ್ಟಿ ಶನಿವಾರ ಘೋಷಣೆಯಾಗುತ್ತಿದ್ದಂತೆ, ಪ್ರಜಾಪ್ರಭುತ್ವದ ಮಹಾಪರ್ವಕ್ಕೆ ದೇಶ ಸಜ್ಜುಗೊಳ್ಳುತ್ತಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ಜಾರಿಗೊಳಿಸುವ ಕ್ರಮವನ್ನು ಚುನಾವಣಾ ಆಯೋಗ ಈ ಬಾರಿಯೂ ಮುಂದುವರಿಸಿದ್ದು, ಈ ನಿಟ್ಟಿನಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಒಟ್ಟು ಮತದಾರರ ಸಂಖ್ಯೆ 96.8 ಕೋಟಿ ತಲುಪಿದ್ದು, ಈ ಪೈಕಿ ಪುರುಷರು 49.7 ಕೋಟಿ, ಮಹಿಳೆಯರು 47 ಕೋಟಿ. ಮೊದಲ ಬಾರಿ ಮತದಾನ ಮಾಡುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವಾಗಿ, 1.89 ಕೋಟಿಗೆ ತಲುಪಿದೆ. 18ರಿಂದ 29 ವರ್ಷದವರೆಗಿನ ಮತದಾರರ ಸಂಖ್ಯೆ 19.74 ಕೋಟಿ. ಯುವ ಮತದಾರರು ಇಷ್ಟು ದೊಡ್ಡ ಪ್ರಮಾಣದಲ್ಲಿ ಇರುವುದು ಭಾರತವೊಂದರಲ್ಲೇ. ಗಮನಾರ್ಹ ಸಂಗತಿಯೆಂದರೆ, ದೇಶದ 12 ರಾಜ್ಯಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಅಂದರೆ, ದೇಶದ ನೇತೃತ್ವ ನಿರ್ಣಯಿಸುವಲ್ಲಿ ಸ್ತ್ರೀಶಕ್ತಿ ಮಹತ್ವದ ಪಾತ್ರ ವಹಿಸಲಿದೆ.

85 ವರ್ಷಕ್ಕೂ ಮೇಲ್ಪಟ್ಟ ವೃದ್ಧರಿಗೆ ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಆಯೋಗ ಕಲ್ಪಿಸಿರುವುದು ಸ್ವಾಗತಾರ್ಹ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಚುನಾವಣೆಯನ್ನು ವಿಶ್ವವೇ ಕುತೂಹಲದಿಂದ ಗಮನಿ ಸುತ್ತಿದೆ. ಚುನಾವಣೆಯನ್ನು ಹಿಂಸಾಚಾರಮುಕ್ತ, ಭ್ರಷ್ಟಾಚಾರಮುಕ್ತವಾಗಿ ನಡೆಸಲು, ಯಾವುದೇ ಗೊಂದಲಗಳು ಇಲ್ಲದಂತೆ ಅಚ್ಚುಕಟ್ಟಾಗಿ ನಡೆಸಲು ಸಂಕಲ್ಪಬದ್ಧವಾಗಿರುವುದಾಗಿ ಆಯೋಗ ಸ್ಪಷ್ಟಪಡಿಸಿದೆ.

ಚುನಾವಣೆ ಎಂಬುದು ದೇಶದ ಉತ್ಸಾಹ ಮತ್ತು ಹೆಮ್ಮೆಯ ಸಂಕೇತ. ಮುಖ್ಯವಾಗಿ, ರಾಜಕೀಯ ಶುದ್ಧೀಕರಣ ಕೈಗೊಳ್ಳಲು, ಅದಕ್ಕಾಗಿ ಸಮರ್ಥ, ದಕ್ಷ ಅಭ್ಯರ್ಥಿಗಳನ್ನು ಆಯ್ಕೆಮಾಡಲು ಜನರ ಕೈಯಲ್ಲಿ ಇರುವ ಪ್ರಬಲ ಅಸ್ತ್ರ. ಆದರೆ, ನಮ್ಮಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂದು ದೂರುವ, ರಾಜಕಾರಣಿಗಳು ಯಾರೂ ಸರಿಯಿಲ್ಲ ಎಂದು ಸಾರಾಸಗಟಾಗಿ ಆರೋಪಿಸುವ ಒಂದು ದೊಡ್ಡ ವರ್ಗವೇ ಮತದಾನದಿಂದ ದೂರ ಉಳಿಯುತ್ತಿರುವುದು ದುರಂತ. ವ್ಯವಸ್ಥೆ ಬದಲಾವಣೆಗೆ ಸಿಗುವ ಅವಕಾಶವೇ ಮತದಾನ. ಅಂಥ ಅವಕಾಶವನ್ನು ಕೈಚೆಲ್ಲಿ, ಆ ಬಳಿಕ ವ್ಯವಸ್ಥೆಯನ್ನು ದೂಷಿಸಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಲದೆ, ಚುನಾವಣೆ ಎಂಬುದು ನಾಗರಿಕಪ್ರಜ್ಞೆ ಮೆರೆಯಲು ಇರುವ ಸುಸಂದರ್ಭ. ಹಾಗಾಗಿ, ಇಲ್ಲಿ ಸಿನಿಕತನ, ನಿರುತ್ಸಾಹ, ನಿರಾಸೆಗೆ ಅವಕಾಶ ಮಾಡಿ ಕೊಡಬಾರದು.

ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಳ್ಳುತ್ತ ಬಂದಿದೆ ಮತ್ತು ಈ ಬಾರಿಯೂ ಅದನ್ನು ಮುಂದುವರಿಸಿದೆ. ಆದರೆ, ಇದು ಬರೀ ಆಯೋಗದ ಪ್ರಯತ್ನವಾಗಿ ಉಳಿಯಬಾರದು. ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು, ಜನಸಾಮಾನ್ಯರು ಇಂಥ ಉಪಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಪ್ರಜಾಪ್ರಭುತ್ವದ ಪರ್ವವನ್ನು ಯಶಸ್ವಿಗೊಳಿಸಬೇಕು. 2019ರ ಲೋಕಸಭೆ ಚುನಾವಣೆಯನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ನಗರಪ್ರದೇಶದವರಿಗಿಂತ ಗ್ರಾಮೀಣಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ, ಪ್ರಜ್ಞಾವಂತಿಕೆ ಮೆರೆದಿದ್ದಾರೆ. ಆದರೆ, ಜನಪ್ರತಿನಿಧಿಗಳಿಂದ, ಸರ್ಕಾರದಿಂದ ಸೌಲಭ್ಯ ಅಪೇಕ್ಷಿಸುವ ನಗರವಾಸಿಗಳಲ್ಲಿ ಅದೆಷ್ಟೋ ಜನರು ಮತದಾನದ ದಿನ ಕೊಟ್ಟ ರಜೆಯನ್ನು ಪ್ರವಾಸ, ಮನರಂಜನೆಗಾಗಿ ಬಳಸುತ್ತಿರುವುದು ವಿಷಾದನೀಯ. ಇಂಥ ಮನಸ್ಥಿತಿ ಬದಲಾಗಬೇಕು. ಒಳ್ಳೆಯ ಜನಪ್ರತಿನಿಧಿ, ಆ ಮೂಲಕ ಜನಪರ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಉದಾಸೀನ ತೊರೆದು ಮತ ಚಲಾಯಿಸಬೇಕು, ಚುನಾವಣಾ ಆಯೋಗದ ಕ್ರಮಗಳನ್ನು ಬೆಂಬಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net