ದಾಖಲೆಗಳ ಸರದಾರ ಇದೊಂದು ರೆಕಾರ್ಡ್​ ಬ್ರೇಕ್​ ಮಾಡಬೇಕಿದೆ! ಕೊಹ್ಲಿಗೆ ಸವಾಲೆಸೆದ ಸುನಿಲ್ ಗವಾಸ್ಕರ್​

WhatsApp Image 2024-05-31 at 12.57.08 PM
Published on

ನವದೆಹಲಿ: ನಾಳೆಯಿಂದ (ಜೂನ್​. 01) ಅಮೆರಿಕಾ ಮತ್ತು ವೆಸ್ಟ್​ ಇಂಡೀಸ್​ ಅತಿಥ್ಯ ವಹಿಸಿರುವ ಐಸಿಸಿ ವಿಶ್ವಕಪ್ 2024ರ ಪಂದ್ಯಾವಳಿಗೆ ಇನ್ನೇನು ಕೆಲವೇ ಸಮಯ ಬಾಕಿ ಉಳಿದಿದ್ದು, ಕ್ಷಣಗಣನೆ ಆರಂಭಗೊಂಡಿದೆ. ಪ್ರಸ್ತುತ ಟೀಂ ಇಂಡಿಯಾದ ಆಟಗಾರರು ಮೈದಾನದಲ್ಲಿ ಭರ್ಜರಿ ತಯಾರಿಗಳನ್ನು ನಡೆಸುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಐಪಿಎಲ್ ಮುಗಿಸಿಕೊಂಡ 'ರನ್​ ಮಷಿನ್' ವಿರಾಟ್ ಕೊಹ್ಲಿ, ಇದೀಗ ಐರ್ಲೆಂಡ್​ ವಿರುದ್ಧದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

11 ವರ್ಷಗಳ ಬಳಿಕ ಮತ್ತೆ ಐಸಿಸಿ ಟ್ರೋಫಿ ಎತ್ತಲು ಹಸಿವಿನಿಂದ ಕಾಯುತ್ತಿರುವ ಟೀಂ ಇಂಡಿಯಾ, ಮೈದಾನದಲ್ಲಿ ಭರ್ಜರಿ ಅಭ್ಯಾಸ ನಡೆಸುವ ಮೂಲಕ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಭಾರತ ತಂಡದ ಪರ ಆಕರ್ಷಕ ಮತ್ತು ಅತ್ಯಧಿಕ ರನ್​ ಕಲೆಹಾಕುವ ಸಾಮರ್ಥ್ಯವುಳ್ಳ ಸ್ಟಾರ್​ ಬ್ಯಾಟ್ಸ್​ಮನ್ ಎಂದರೆ ಅದು 'ರನ್ ಮಷಿನ್'. ಇದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೂ ತಿಳಿದಿರುವ ಸಂಗತಿಯೇ. ಐಪಿಎಲ್​ನಲ್ಲಿ ಆರ್​ಸಿಬಿ ಪರ ಓಪನಿಂಗ್ ಆಡಿದ ವಿರಾಟ್​, ಸ್ಪೋಟಕ ಬ್ಯಾಟಿಂಗ್ ಕೊಡುಗೆ ನೀಡಿದ್ದಾರೆ.

ಐಪಿಎಲ್ 17ನೇ ಸೀಸನ್​ನಲ್ಲಿ ಅತ್ಯಧಿಕ ರನ್ ಕಲೆಹಾಕುವ ಮೂಲಕ ಆರೆಂಜ್ ಕ್ಯಾಪ್​ ಸ್ವೀಕರಿಸಿದ ವಿರಾಟ್​, ಸದ್ಯ ಐಪಿಎಲ್​ನಿಂದಲೂ ಅತ್ಯುತ್ತಮ ಫಾರ್ಮ್​​ನಲ್ಲಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ಮಾಜಿ ಕ್ರಿಕೆಟ್ ದಿಗ್ಗಜರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತಮ ಫಾರ್ಮ್​ನಲ್ಲಿರುವ ಕೊಹ್ಲಿ, ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪರ ಇದೇ ಫಾರ್ಮ್​ನ ಮುಂದುವರೆಸುವ ವಿಶ್ವಾಸವಿದೆ. ಆದ್ರೆ, ಆರ್​ಸಿಬಿ ತಂಡದಲ್ಲಿ ಓಪನರ್​ ಆಗಿ ಬಂದಂತೆ, ಇಲ್ಲಿಯೂ ಓಪನಿಂಗ್ ಬ್ಯಾಟ್ಸ್​ಮನ್​ ಆಗಿ ಕಣಕ್ಕಿಳಿಯಲಿದ್ದಾರಾ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ.

ಇನ್ನು ವಿರಾಟ್​ ಕೊಹ್ಲಿ ದಾಖಲೆಗಳ ಹೆಸರು ಬಂದರೆ ಅಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್​ ಅವರ ಹೆಸರು ಸಹ ಮುಂಚೂಣಿಯಲ್ಲಿರುತ್ತದೆ. ಕಾರಣ, ಕೊಹ್ಲಿ ವಿಚಾರವನ್ನು ಮೊದಲು ಪ್ರಸ್ತಾಪ ಮಾಡುವುದೇ ಗವಾಸ್ಕರ್​. ಕಳೆದ ಐಪಿಎಲ್​ ಲೀಗ್​ನಲ್ಲಿ ಅವರ ಸ್ಟ್ರೈಕ್​ ರೇಟ್​ ಬಗ್ಗೆ ಟೀಕೆ ಮಾಡಿದ್ದ ಸುನಿಲ್​, ರನ್​ ಮಷಿನ್ ಅಭಿಮಾನಿಗಳ ಕೆಂಗಣ್ಣಿಗೆ ನೇರವಾಗಿ ಗುರಿಯಾಗಿದ್ದರು. ಇದೀಗ ಮತ್ತೊಮ್ಮೆ ಕೊಹ್ಲಿ ಫ್ಯಾನ್ಸ್​ಗಳ ಕಿಡಿಗೆ ತುತ್ತಾಗಿದ್ದಾರೆ.

ಆಸ್ಟ್ರೇಲಿಯಾದ ಹಲವು ಹೆಸರಾಂತ ಸ್ಟೇಡಿಯಂಗಳಲ್ಲಿ ಆಯೋಜಿಸಲಾದ ಟೆಸ್ಟ್​ ಪಂದ್ಯಗಳಲ್ಲಿ ಸೆಂಚುರಿ ಬಾರಿಸಿ, ದಾಖಲೆ ಬರೆದ ವಿದೇಶಿ ಆಟಗಾರರು ಎಂದರೆ ಅದು ಭಾರತದ ಸುನಿಲ್ ಗವಾಸ್ಕರ್ ಮತ್ತು ಇಂಗ್ಲೆಂಡ್​ನ ಮಾಜಿ ಕ್ಯಾಪ್ಟನ್​ ಅಲೆಸ್ಟರ್ ಕುಕ್ ಮಾತ್ರ. ಇದೇ ಮೈದಾನಗಳಲ್ಲಿ ಕೊಹ್ಲಿ ಕೂಡ ಹೆಚ್ಚುವರಿ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆದ್ರೆ, ಬ್ರಿಸ್ಬೇನ್‌ನಲ್ಲಿರುವ ಪ್ರತಿಷ್ಠಿತ ಗಬ್ಬಾದಲ್ಲಿ ದಾಖಲೆ ನಿರ್ಮಿಸಲು ಸಾಧ್ಯವಾಗಿಲ್ಲ. ಸದ್ಯ ಇದನ್ನೇ ಮುಂದಿಟ್ಟು ಸವಾಲೆಸೆದ ಗವಾಸ್ಕರ್​, "ಇಲ್ಲಿ ಏನಾದರೂ ವಿರಾಟ್​ ರೆಕಾರ್ಡ್​ ಮಾಡಿದ್ರೆ, ಈ ಮೈಲಿಗಲ್ಲು ಸಾಧಿಸಿದ ಮೂರನೇ ಆಟಗಾರನಾಗಿ ಹೊರಹೊಮ್ಮುತ್ತಾ" ಎಂದಿದ್ದಾರೆ.

"ಗಬ್ಬಾದಲ್ಲಿ ವಿರಾಟ್​ ಶತಕ ಬಾರಿಸಿದರೆ, ನನ್ನ ಮತ್ತು ಕುಕ್ ನಂತರದಲ್ಲಿ ಅವರ ಹೆಸರು ಕೂಡ ಈ ವಿಶಿಷ್ಟ ದಾಖಲೆಗೆ ಸೇರಲಿದೆ" ಎಂದು ಇತ್ತೀಚೆಗೆ ನಡೆದ ಈವೆಂಟ್​ನಲ್ಲಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net