ನ್ಯೂಜಿಲೆಂಡ್​ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಡಬಲ್ ಶಾಕ್; ಕಿಶನ್‌ಗೆ ಕಚ್ಚಿದ ಜೇನು, ಅಭ್ಯಾಸದ ವೇಳೆ ಸೂರ್ಯಗೆ ಗಾಯ

Ishan Surya
Published on

ಧರ್ಮಶಾಲಾ: ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿರುವ ಭಾರತ ತಾನು ಆಡಿರುವ ನಾಲ್ಕು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಫೇವರಿಟ್​ ತಂಡವೆನ್ನಿಸಿದೆ. ಐದನೇ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್​ಅನ್ನು ಎದುರಿಸಲಿದ್ದು, ಇದಕ್ಕೂ ಮುನ್ನ ತಂಡಕ್ಕೆ ಡಬಲ್​ ಶಾಕ್​ ಒಂದು ಎದುರಾಗಿದೆ.

ಈಗಾಗಲೇ ಹಾರ್ದಿಕ್​ ಪಾಂಡ್ಯ ಅಲಭ್ಯತೆಯಿಂದ ಕಂಗೆಟ್ಟಿರುವ ಟೀಂ ಇಂಡಿಯಾಗೆ ಮತ್ತೊಂದು ಆಘಾತವಾಗಿದ್ದು, ಅಭ್ಯಾಸದ ವೇಳೆ ಇಬ್ಬರು ಆಟಗಾರರು ಗಾಯಗೊಂಡಿದ್ದಾರೆ. ಬ್ಯಾಟ್ಸ್​ಮನ್​ಗಳಾದ ಇಶಾನ್​ ಕಿಶನ್​ ಹಾಗೂ ಸೂರ್ಯಕುಮಾರ್ ಯಾದವ್​ ಅಭ್ಯಾಸದ ವೇಳೆ ಗಾಯಗೊಂಡಿರುವ ಆಟಗಾರರು ಎಂದು ತಿಳಿದು ಬಂದಿದೆ.

ಶನಿವಾರ ತಂಡದ ಅಭ್ಯಾಸ ಅವಧಿಯ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ ತಮ್ಮ ಬಲಗೈ ಮಣಿಕಟ್ಟಿಗೆ ಬಲವಾದ ಪೆಟ್ಟು ತಿಂದಿದ್ದಾರೆ. ಬೌಲಿಂಗ್‌ ಥ್ರೋಡೌನ್‌ ಸ್ಪೆಷಲಿಸ್ಟ್‌ ರಘು ಅವರ ಎಸೆತಗಳನ್ನು ಎದುರಿಸುವ ವೇಳೆ, ಚೆಂಡು ಬಿದ್ದು ಗಾಯವಾಗಿದ್ದು ಸೂರ್ಯಕುಮಾರ್‌ ಯಾದವ್‌ ತಮ್ಮ ಮಣಿಕಟ್ಟಿಗೆ ಬ್ಯಾಂಡೇಜ್‌ಅನ್ನೂ ಕಟ್ಟಿಕೊಂಡಿದ್ದಾರೆ. ಇನ್ನೊಂದೆಡೆ ಇಶಾನ್‌ ಕಿಶನ್‌ ಬ್ಯಾಟಿಂಗ್‌ ಮಾಡುವ ವೇಳೆ ಜೇನುಹಳ ಮುಖಕ್ಕೆ ಕಚ್ಚಿ ಗಾಯಗೊಂಡಿದ್ದಾರೆ.

ಸ್ಟಾರ್‌ ಆಲ್ರೌಂಡರ್‌ ಈಗಾಗಲೇ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇವರ ಸ್ಥಾನದಲ್ಲಿ ಇಶಾನ್‌ ಕಿಶನ್‌ ಅಥವಾ ಸೂರ್ಯಕುಮಾರ್‌ ಯಾದವ್‌ ಅವರನ್ನು ಆಡಿಸುವ ಇರಾದೆಯಲ್ಲಿ ಟೀಮ್‌ ಇಂಡಿಯಾ ಮ್ಯಾನೇಜ್‌ಮೆಂಟ್‌ ಇತ್ತು. ಅದರ ನಡುವೆ ಇವರಿಬ್ಬರೂ ಗಾಯಗೊಂಡಿರುವ ಕಾರಣ ತಂಡದ ಪ್ಲೇಯಿಂಗ್‌ ಇಲೆವೆನ್‌ ಆಯ್ಕೆ ಕಷ್ಟವಾಗಬಹುದು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net