

ರಾಂಚಿ: ರಸ್ತೆಬದಿ ಗೋಲ್ಗಪ್ಪಾ ಸೇವಿಸಿದ ಪರಿಣಾಮ ಮಕ್ಕಳು, ಮಹಿಳೆಯರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಜಾರ್ಖಂಡ್ನ ಕೊಡೆರ್ಮಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ 40 ಮಕ್ಕಳು, 10 ಮಂದಿ ಮಹಿಳೆಯರು ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿಗಳ ಮಾದರಿಯನ್ನು ರಾಂಚಿಗೆ ಕಳುಹಿಸಲಾಗಿದೆ. ವರದಿ ಕೈಸೇರಿದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ (ACMO), ನಗರದ ಲೋಕೈಲೋಕೈ ಪಂಚಾಯತ್ ವ್ಯಾಪ್ತಿಯ ಗೋಸೈನ್ ಟೋಲಾದಲ್ಲಿ ಬೀದಿಬದಿ ವ್ಯಾಪಾರಿಯೊಬ್ಬರಿಂದ ಗೋಲ್ ಗಪ್ಪಾ ಸೇವಿಸಿದ ಬಳಿಕ 40 ಮಕ್ಕಳು ಮತ್ತು 10 ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ.
ಗೋಲ್ಗಪ್ಪಾ ಸೇವಿಸಿದ ಬಳಿಕ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ಹದಗೆಟ್ಟಿದ್ದು, ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಕಲುಷಿತ ಆಹಾರ ಸೇವನೆಯಿಂದಾಗಿ ಗೋಲ್ಗಪ್ಪಾ ಸೇವಿಸಿದವರು ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ವ್ಯಾಪಾರಿ ಬಳಿ ಇದ್ದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮಾದರಿಯನ್ನು ರಾಂಚಿಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ (ACMO) ತಿಳಿಸಿದ್ದಾರೆ.