

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡವು ಇತ್ತೀಚಿನ ವರ್ಷಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸದಾ ಟೀಕೆಗೆ ಗುರಿಯಾಗುತ್ತದೆ. ಟಿ-20 ವಿಶ್ವಕಪ್ ಸೇರಿದಂತೆ ದ್ವಿಪಕ್ಷೀಯ ಸರಣಿಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಕಳಪೆ ಪ್ರದರ್ಶನದಿಂದಾಗಿ ಮುಖಭಂಗವನ್ನು ಅನುಭವಿಸುತ್ತಿದ್ದು, ಇಷ್ಟಾದರೂ ಅಲ್ಲಿನ ಮಾಜಿ ಕ್ರಿಕೆಟಿಗರು ಟೀಮ್ ಇಂಡಿಯಾ ಆಟಗಾರರ ವಿರುದ್ಧ ಆರೋಪ ಅಥವಾ ಟೀಕೆ ಮಾಡುವುದ್ನು ನಿಲ್ಲಿಸದಿರುವುದು ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
2023ರಲ್ಲಿ ಭಾರತದ ಅತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ರನ್ನರ್ಅಪ್ ಆಗಿ ಹೊರಹೊಮ್ಮಿತ್ತು. ಆದರೆ, ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ಹೀನಾಯ ಪ್ರದರ್ಶನದಿಂದಾಗಿ ಟೂರ್ನಿಯಿಂದ ಹೊರಬಿದ್ದಿತ್ತು. ಇದರ ನಡುವೆಯೇ ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಹಫೀಜ್ ವಿರಾಟ್ ಕೊಹ್ಲಿ ಕುರಿತು ನೀಡಿರುವ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದು, ಭಾರತೀಯರು ಕಿಡಿಕಾರಿದ್ದಾರೆ.
ಕಳೆದ ವರ್ಷ ಕಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತದ ಪರ ವಿರಾಟ್ ಕೊಹ್ಲಿ 121 ಎಸೆತಗಳನ್ನು ಎದುರಿಸಿ 101 ರನ್ ಗಳಿಸುವ ಮೂಲಕ ತಂಡ 50 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 326 ರನ್ ಗಳಿಸುವಲ್ಲಿ ಸಹಕಾರಿಯಾಗಿದ್ದರು. ಆದರೆ, ಈ ಬಗ್ಗೆ ಮಾತನಾಡಿರುವ ಹಫೀಜ್ ವಿರಾಟ್ ತಂಡಕ್ಕಿಂತ ತಮ್ಮ ಸ್ವಾರ್ಥಕ್ಕಾಗಿಯೇ ಶತಕ ಗಳಿಸಿದರು ಎಂದು ಆರೋಪಿಸಿದ್ದಾರೆ.
ನಾನು ನೋಡಿದಂತೆ ಆಟಗಾರರು 90 ರನ್ ಗಳಿಸಿದಾಗ ದೊಡ್ಡ ಹೊಡೆತಗಳಿಗೆ ಮುಂದಾಗುತ್ತಾರೆ ಮತ್ತು ಬೇಗನೆ ತಮ್ಮ ಶತಕವನ್ನು ಪೂರ್ಣ ಮಾಡಿಕೊಳ್ಳುವುದರ ಬಗ್ಗೆ ಯೋಚಿಸುತ್ತಿರುತ್ತಾರೆ ಆದರೆ, ವಿರಾಟ್ ಕೊಹ್ಲಿ ಯಾವುದೇ ದೊಡ್ಡ ಹೊಡೆತಕ್ಕೆ ಕೈಹಾಕದೆ ನಿಧಾನಕ್ಕೆ ಆಡುವ ಮೂಲಕ ತಮ್ಮ ಸ್ವಾರ್ಥವನ್ನು ಎತ್ತಿ ತೋರಿಸಿದರು ಎಂದು ಮೊಹಮ್ಮದ್ ಹಫೀಜ್ ವಿರಾಟ್ ಕೊಹ್ಲಿ ಮತ್ತೊಮ್ಮೆ ದೂರಿದ್ದಾರೆ.
ಈ ಹಿಂದೆ ವಿಶ್ವಕಪ್ ಸಮಯದಲ್ಲಿ ವಿರಾಟ್ ಕೊಹ್ಲಿ ಕುರಿತು ಲಘುವಾಗಿ ಮಾತನಾಡುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದ ಹಫೀಜ್ ಆ ನಂತರ ಸ್ಪಷ್ಟನೆ ನೀಡುವ ಭರದಲ್ಲಿ ಮತ್ತಷ್ಟು ಟ್ರೋಲ್ ಆಗಿದ್ದರು ಇದೀಗ ಹಳೆಯ ವಿಚಾರವಾಗಿ ವಿರಾಟ್ ಕೊಹ್ಲಿ ಕುರಿತು ಮತ್ತೊಮ್ಮೆ ಮಾತನಾಡುವ ಮೂಲಕ ಸುದ್ದಿಯಾಗಿರುವ ಹಫೀಜ್ ಹೇಗೆ ಸ್ಪಷ್ಟನೆ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.