ಆರ್​ಸಿಬಿ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ: ಇದೊಂದು ಮಾತ್ರ ಆಗದಿರಲೆಂದು ದೇವರ ಮೊರೆ ಹೋದ ಫ್ಯಾನ್ಸ್​

RCB CSK
Published on

ಬೆಂಗಳೂರು: ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಬಹು ನಿರೀಕ್ಷಿತವಾಗಿದೆ. ಉಭಯ ತಂಡದ ಕ್ರೀಡಾಭಿಮಾನಿಗಳು ಈ ಪಂದ್ಯಕ್ಕಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಎರಡೂ ತಂಡಗಳು ಪ್ಲೇಆಫ್‌ಗೆ ಹೋಗಲು ಈ ಪಂದ್ಯವು ಬಹಳ ಮುಖ್ಯವಾಗಿದೆ. ಸಿಎಸ್‌ಕೆ 13 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಅಲ್ಲದೆ ಆರ್​ಸಿಬಿ 13 ಪಂದ್ಯಗಳಲ್ಲಿ 12 ಅಂಕ ಗಳಿಸಿ ಐದನೇ ಸ್ಥಾನದಲ್ಲಿದೆ. ಹೀಗಾಗಿ ಇದು ನಾಕೌಟ್​ ಪಂದ್ಯವಾಗಿದೆ. ಸಿಎಸ್‌ಕೆಗಿಂತ ಆರ್​ಸಿಬಿಗೆ ಈ ಪಂದ್ಯ ಮಹತ್ವದ್ದಾಗಿದೆ. ಪ್ಲೇಆಫ್‌ಗೆ ಪ್ರವೇಶಿಸಲು ಭಾರಿ ಅಂತರದಿಂದ ಆರ್​ಸಿಬಿ ಗೆಲ್ಲಲೇಬೇಕಿದೆ.

ಆರ್‌ಸಿಬಿಯ ಸದ್ಯದ ಫಾರ್ಮ್ ಗಮನಿಸಿದರೆ, ಖಂಡಿತವಾಗಿಯೂ ಈ ಪಂದ್ಯವನ್ನು ಗೆಲ್ಲುತ್ತಾರೆ ಎಂಬ ಭರವಸೆ ಅಭಿಮಾನಿಗಳಲ್ಲಿ ಬಲವಾಗಿದೆ. ಆದರೆ, ಅಭಿಮಾನಿಗಳಲ್ಲಿ ಆತಂಕ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಆರ್‌ಸಿಬಿ ವರ್ಸಸ್ ಸಿಎಸ್‌ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆಯಂತೆ. ಮೇ 18 ರಂದು ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಆದರೆ, ಅದೇ ದಿನ ಬೆಂಗಳೂರಿನಲ್ಲಿ ಮಳೆಯಾಗುವ ಸೂಚನೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ.

ಇದರಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ವ್ಯಕ್ತವಾಗಿದೆ. ಅದರಲ್ಲೂ ಆರ್‌ಸಿಬಿ ಅಭಿಮಾನಿಗಳು ಗೊಂದಲದಲ್ಲಿದ್ದಾರೆ. ಪ್ಲೇಆಫ್‌ಗೆ ಹೋಗಲು CSK ವಿರುದ್ಧ ಗೆಲ್ಲಲೇಬೇಕು. ಹಾಗೆ ಗೆಲ್ಲಬೇಕಾದರೆ ಪಂದ್ಯ ನಡೆಯಲೇಬೇಕು. ಮಳೆಯಿಂದಾಗಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ಒಂದೊಂದು ಅಂಕ ಸಿಗಲಿದೆ. ಹೀಗಾಗದಲ್ಲಿ ಆರ್​ಸಿಬಿ ಐಪಿಎಲ್​ನಿಂದ ಹೊರ ಬೀಳಲಿದೆ. ಮಳೆ ಬಂದು ಪಂದ್ಯ ರದ್ದಾದರೆ ಸಿಎಸ್​ಕೆ ಪ್ಲೇ ಆಫ್‌ಗೆ ಹೋಗಲಿದೆ.

ಹೀಗಾಗಿ ಆರ್​ಸಿಬಿ ಅಭಿಮಾನಿಗಳು ಮಳೆ ಬರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಪಂದ್ಯ ನಡೆಯಲೇಬೇಕಿದೆ. ಇದು ಆರ್​ಸಿಬಿ ಪಾಲಿಗೆ ನಿರ್ಣಾಯಕವಾಗಿದ್ದು, ಮಾಡು ಇಲ್ಲವೆ ಮಡಿ ಪಂದ್ಯವಾಗಿರಲಿದೆ. ಹೀಗಾಗಿ ಮಳೆ ಬಾರದಿರಲಿ ಎಂದು ದೇವರಲ್ಲಿ ಮೊರೆ ಇಡುತ್ತಿದ್ದಾರೆ. ಅಭಿಮಾನಿಗಳ ಈ ಪಾರ್ಥನೆ ಫಲಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅಂದಹಾಗೆ ಐಪಿಎಲ್​-17ರಲ್ಲಿ ಆರಂಭಿಕ 8ರಲ್ಲಿ 7ರಲ್ಲಿ ಸೋತು, ಇದೀಗ ಸತತ 5 ಜಯದೊಂದಿಗೆ ಬೀಗುತ್ತಿರುವ ಆರ್​ಸಿಬಿ ಪಾಲಿಗೆ ಈಗ 18 ಅದೃಷ್ಟದ ಸಂಖ್ಯೆ ಆಗಬೇಕಿದೆ! ಯಾಕೆಂದರೆ ಮೇ 18ರಂದು ಬೆಂಗಳೂರಿನಲ್ಲಿ ಸಿಎಸ್​ಕೆ ವಿರುದ್ಧ ನಡೆಯಲಿರುವ ಕಡೇ ಲೀಗ್​ ಪಂದ್ಯ ಆರ್​ಸಿಬಿ ಪಾಲಿಗೆ ನಿರ್ಣಾಯಕ. ಈ ಪಂದ್ಯದಲ್ಲಿ 18 ಜೆರ್ಸಿ ನಂಬರ್​ ಆಟಗಾರ ವಿರಾಟ್​ ಕೊಹ್ಲಿ ಸಿಡಿದರೆ ಮತ್ತು 18 ರನ್​ಗಳಿಂದ ಗೆದ್ದರೆ ಆರ್​ಸಿಬಿಗೆ ಪ್ಲೇಆಫ್​ ಅವಕಾಶ ಒಲಿಯಲಿದೆ. ಆದರೆ ಅದಕ್ಕೆ ಮುನ್ನ ಲಖನೌ ತಂಡ ಮಂಗಳವಾರ ಡೆಲ್ಲಿ ವಿರುದ್ಧ ಸೋಲಬೇಕು ಅಥವಾ ಶುಕ್ರವಾರ ಮುಂಬೈ ವಿರುದ್ಧವಾದರೂ ಸೋಲಬೇಕು ಅಥವಾ ಸನ್​ರೈಸರ್ಸ್​ ತಂಡ ಉಳಿದಿರುವ ಪಂದ್ಯಗಳನ್ನು ಹೀನಾಯವಾಗಿ ಸೋಲಬೇಕು. ಇವೆರಡೂ ಫಲಿಸಿದರೆ ಆರ್​ಸಿಬಿ-ಸಿಎಸ್​ಕೆ ಎರಡೂ ಪ್ಲೇಆಫ್​​ಗೇರುವ ಅವಕಾಶವನ್ನೂ ಹೊಂದಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net