

ನವದೆಹಲಿ: ಪ್ರಸಕ್ತ ಐಪಿಎಲ್ ಟೂರ್ನಿಯ ಆರಂಭದಲ್ಲಿ ತೀವ್ರ ಕುಸಿತಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಫಿನಿಕ್ಸ್ ಪಕ್ಷಿಯಂತೆ ಮೇಲೆದ್ದು ಬಂದಿದೆ. ಮೊದಲ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಗೆಲ್ಲುವ ಮೂಲಕ ತೀವ್ರ ನಿರಾಸೆ ಮೂಡಿಸಿದ್ದ ಆರ್‌ಸಿಬಿ, ಇದೀಗ ಸತತ 5 ಪಂದ್ಯಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಪ್ಲೇಆಫ್ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ.
ಇದರ ನಡುವೆ ಟೀಮ್ ಇಂಡಿಯಾದ ಮಾಜಿ ಲೆಜೆಂಡರಿ ಬೌಲರ್ ಹರ್ಭಜನ್ ಸಿಂಗ್ ಆರ್‌ಸಿಬಿ ಕುರಿತು ಮಹತ್ವದ ಕಾಮೆಂಟ್ ಮಾಡಿದ್ದಾರೆ. ಆರ್‌ಸಿಬಿ ಕಪ್ ಗೆಲ್ಲಬೇಕಾದರೆ ಡುಪ್ಲೆಸಿಸ್ರನ್ನು ನಾಯಕತ್ವ ಸ್ಥಾನದಿಂದ ಕೈಬಿಟ್ಟು ಆ ಜವಾಬ್ದಾರಿಯನ್ನು ಈ ಆಟಗಾರನಿಗೆ ನೀಡಬೇಕೆಂದು ಸಲಹೆ ನೀಡಿದ್ದಾರೆ. ಭಜ್ಜಿ ಹೇಳಿದ ಆ ಆಟಗಾರ ಯಾರು ಎಂಬುದನ್ನು ನಾವೀಗ ತಿಳಿಯೋಣ.
ಆರ್‌ಸಿಬಿ ಈ ಋತುವಿನಲ್ಲಿ ಪ್ಲೇಆಫ್‌ಗೆ ಹೋಗಲು ಬಯಸಿದರೆ, ಚೆನ್ನೈ ವಿರುದ್ಧದ ಪಂದ್ಯವನ್ನು 18 ರನ್‌ಗಳಿಂದ ಅಥವಾ 11 ಎಸೆತಗಳು ಬಾಕಿ ಇರುವಂತೆಯೇ ಗೆಲ್ಲಬೇಕು. ಇಲ್ಲದಿದ್ದರೆ ಮನೆಗೆ ಹೋಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯದಿದ್ದರೆ ನಾಯಕತ್ವದ ಬಗ್ಗೆ ಆಡಳಿತ ಮಂಡಳಿ ಮರುಪರಿಶೀಲನೆ ನಡೆಸಬೇಕು. ವಿದೇಶಿ ಆಟಗಾರನನ್ನು ನಾಯಕನ ಸ್ಥಾನದಿಂದ ತೆಗೆದು ಹಾಕಿ, ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಮತ್ತೆ ಆರ್‌ಸಿಬಿ ನಾಯಕನನ್ನಾಗಿ ಮಾಡಬೇಕು ಎಂದು ಭಜ್ಜಿ ಸಲಹೆ ನೀಡಿದ್ದಾರೆ.
ಆರ್‌ಸಿಬಿ ಈ ಸೀಸನ್‌ನಲ್ಲಿ ಪ್ಲೇಆಫ್‌ಗೆ ಹೋಗದಿದ್ದರೆ ವಿರಾಟ್ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ನೇಮಿಸಬೇಕು. ಕೊಹ್ಲಿಯನ್ನು ನಾಯಕನನ್ನಾಗಿ ಏಕೆ ನೇಮಿಸಬೇಕು ಅಂದರೆ, ಐಪಿಎಲ್‌ನಲ್ಲಿ ಧೋನಿ ತೋರುತ್ತಿರುವ ಪ್ರಭಾವವನ್ನು ಕೊಹ್ಲಿ ತೋರಿಸಬಹುದು. ವಿರಾಟ್‌ಗೆ ಅಧಿಕಾರ ಹಸ್ತಾಂತರಿಸಿದರೆ ಮಾತ್ರ ಅವರು ತಂಡವನ್ನು ಆಕ್ರಮಣಕಾರಿಯಾಗಿ ಮುನ್ನಡೆಸಬಲ್ಲರು. ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ಮಾಡಿದರೆ ಮಾತ್ರ ಆರ್‌ಸಿಬಿ ಕಪ್ ಗೆಲ್ಲುತ್ತದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)