ನಿನಗೆ 400 ಕೋಟಿ ರೂ. ಸಾಕಲ್ಲವೇ? ರಾಹುಲ್​ರನ್ನು ಬೈದ LSG ಮಾಲೀಕನಿಗೆ ವೀರೂ ತರಾಟೆ!

Virender Sehwag
Published on

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್, ಕ್ರಿಕೆಟ್​ ಪಂದ್ಯಗಳು ಮತ್ತು ಆಟಗಾರರ ಪ್ರದರ್ಶನದ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಕ್ರಿಕೆಟ್​ನಲ್ಲಿ ಯಾವುದೇ ವಿಶೇಷ ಘಟನೆ ನಡೆದಾಗಲೂ ವೀರೂ ಭಾಯ್ ತಮ್ಮ ವಿಡಂಬನಾತ್ಮಕ ಕೌಂಟರ್‌ಗಳನ್ನು ಎಸೆಯುವಲ್ಲಿ ಸಿದ್ಧಹಸ್ತರು. ಇತ್ತೀಚೆಗೆ ವೀರೂ ಐಪಿಎಲ್ ಫ್ರಾಂಚೈಸಿ ಮಾಲೀಕರ ವಿರುದ್ಧ ಆಘಾತಕಾರಿ ಕಾಮೆಂಟ್​ಗಳನ್ನು ಮಾಡಿದ್ದಾರೆ. ಯಾವುದೇ ಟೂರ್ನಿಯಲ್ಲಿ ಕೋಚ್ ಮತ್ತು ನಾಯಕರು ಆಯಾ ತಂಡಗಳನ್ನು ಮುನ್ನಡೆಸುತ್ತಾರೆ. ಇಲ್ಲಿ ಮಾಲೀಕರ ಹಸ್ತಕ್ಷೇಪ ಅಗತ್ಯವಿಲ್ಲ ಎಂದು ವೀರೂ ಟೀಕಾ ಪ್ರಹಾರ ನಡೆಸಿದ್ದಾರೆ. ಅಷ್ಟಕ್ಕೂ ವೀರೂ ಈ ಮಾತನ್ನು ಏಕೆ ಹೇಳಿದರು? ಇದಕ್ಕೊಂದು ಕಾರಣ ಇದೆ. ಅದೇನಂಥಾ ನಾವೀಗ ತಿಳಿಯೋಣ.

ಇತ್ತೀಚೆಗೆ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಖನೌ ಸೂಪರ್‌ಜೈಂಟ್ಸ್ (ಎಲ್​ಎಸ್​ಜಿ) ನಡುವೆ ಐಪಿಎಲ್​ ಪಂದ್ಯ ನಡೆದಿದ್ದು ಎಲ್ಲರಿಗೂ ತಿಳಿದಿದೆ. ಈ ಪಂದ್ಯದಲ್ಲಿ ಎಲ್​ಎಸ್​ಜಿ ಹೀನಾಯವಾಗಿ ಸೋತಿದ್ದರಿಂದ ಆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮೈದಾನದಲ್ಲೇ ನಾಯಕ ಕೆ.ಎಲ್. ರಾಹುಲ್ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಕೋಚ್ ಜಸ್ಟಿನ್ ಲ್ಯಾಂಗರ್ ಜತೆಯೂ ಇದೇ ರೀತಿಯ ವರ್ತನೆ ತೋರಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿರುವೆ. ಈ ವಿಚಾರವಾಗಿ ಸ್ವಲ್ಪ ತಡವಾಗಿ ಪ್ರತಿಕ್ರಿಯಿಸಿದರೂ ವೀರೇಂದ್ರ ಸೆಹ್ವಾಗ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಸೋತ ನಂತರ ಲಖನೌ ಮಾಲೀಕರು ನಾಯಕ ಕೆ.ಎಲ್. ರಾಹುಲ್ ಅವರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ. ಪಂದ್ಯ ಸೋತರೆ ಡ್ರೆಸ್ಸಿಂಗ್ ರೂಮಿನಲ್ಲಿ ಮಾತನಾಡಬೇಕು. ಆದರೆ, ಆ ಮಾತುಗಳು ಸ್ಫೂರ್ತಿಯಾಗಬೇಕೆ ಹೊರತು ಎಲ್ಲರ ಮುಂದೆ ಈ ರೀತಿ ಬೈಯುವುದು ಸರಿಯಾದ ವಿಧಾನವಲ್ಲ. ಮಾಲೀಕರು ತಂಡವನ್ನು ಮುನ್ನಡೆಸುವವರಾಗಬಾರದು. ಅದರ ಕೆಲಸ ಕೋಚ್​ ಮತ್ತು ನಾಯಕನಿಗೆ ಸೇರಿದ್ದು ಎಂದು ವೀರೂ ಹೇಳಿದ್ದಾರೆ.

ಮಾಲೀಕರು ಲಾಭ ಮತ್ತು ನಷ್ಟದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ನಿಮಗೆ 400 ರೂ. ಕೋಟಿ ಲಾಭ ಸಾಕಲ್ಲವೇ? ಇದಕ್ಕಿಂತ ನಿಮಗೆ ಇನ್ನೇನು ಬೇಕು? ಮಾಲೀಕರು ಲಾಭ ನೋಡುವ ಕೆಲಸ ಬಿಟ್ಟು ಬೇರೆ ಯಾವುದೇ ಕೆಲಸದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬುದು ನನ್ನ ಅಭಿಪ್ರಾಯ. ಈ ವರ್ತನೆಯಿಂದ ಆಟಗಾರರು ಇತರ ಫ್ರಾಂಚೈಸಿಗಳಿಗೆ ಹೋದರೆ, ಅದು ನಿಮಗೆ ನಷ್ಟವಾಗುತ್ತದೆ ಎಂದು ವೀರೂ ಕ್ರಿಕ್‌ಬಜ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೇ 8ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಖನೌ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಆರಂಭಿಕರಾದ ಕೆ.ಎಲ್.ರಾಹುಲ್ 33 ಎಸೆತಗಳಲ್ಲಿ 29 ರನ್, ಕ್ವಿಂಟನ್ ಡಿ ಕಾಕ್ 2, ಸ್ಟೊಯಿನಿಸ್ 3, ಕೃನಾಲ್ ಪಾಂಡ್ಯ 24 ರನ್ ಗಳಿಸಿ ದಯನೀಯವಾಗಿ ವಿಫಲರಾದರು. ಅಂತಿಮವಾಗಿ ಪೂರನ್ 48 ಮತ್ತು ಆಯುಷ್ ಬಡೋನಿ 55 ರನ್ ಗಳಿಸಿದರು. ಎಸ್​ಆರ್​ಎಚ್ ಬೌಲರ್​ಗಳ ಪೈಕಿ ಭುವನೇಶ್ವರ್ ಕುಮಾರ್ 2 ವಿಕೆಟ್ ಹಾಗೂ ನಾಯಕ ಕಮಿನ್ಸ್ ಒಂದು ವಿಕೆಟ್ ಪಡೆದರು.

166 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಎಸ್‌ಆರ್‌ಎಚ್ ಕೇವಲ 9.4 ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್ ನಷ್ಟವಿಲ್ಲದೆ ಗುರಿಯನ್ನು ಮುಟ್ಟಿತು. ಆರಂಭಿಕರಾದ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 75 ರನ್ ಹಾಗೂ ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ 89 ರನ್​ಗಳಿಸಿ ಚಂಡಮಾರುತ ಸೃಷ್ಟಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net