ಟೆನಿಸ್ ಆಟಗಾರರ ನೆರವಿಗೆ 45 ಕೋಟಿ ರೂಪಾಯಿ ನಿಧಿ

COVID-19-Tennis-world-joins
Published on

ಪ್ಯಾರಿಸ್: ಕರೊನಾ ವೈರಸ್ ಭೀತಿಯಿಂದ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿರು ವುದರಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಟೆನಿಸ್ ಆಟಗಾರರ ನೆರವಿಗಾಗಿ 45.54 ಕೋಟಿ ರೂ. (6 ದಶಲಕ್ಷ ಡಾಲರ್) ಮೊತ್ತವನ್ನು ಸಂಗ್ರಹಿಸಲಾಗಿದೆ.

ಜಾಗತಿಕ ಪುರುಷರ ಮತ್ತು ಮಹಿಳಾ ಟೆನಿಸ್ ಆಡಳಿತ ಸಂಸ್ಥೆಗಳಾದ ಎಟಿಪಿ, ಡಬ್ಲ್ಯುಟಿಎ, ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಮತ್ತು 4 ಗ್ರಾಂಡ್ ಸ್ಲಾಂ ಟೂರ್ನಿಗಳ ಸಂಘಟಕರು ಒಗ್ಗೂಡಿ ಈ ವೈರಸ್ ಪರಿಹಾರ ನಿಧಿಯನ್ನು ಸ್ಥಾಪಿಸಿದ್ದಾರೆ. ಇದರಿಂದ ವಿಶ್ವದ ಸುಮಾರು 800 ಎಟಿಪಿ, ಡಬ್ಲ್ಯುಟಿಎ ಸಿಂಗಲ್ಸ್ ಮತ್ತು ಡಬಲ್ಸ್ ಆಟಗಾರರಿಗೆ ಅಗತ್ಯ ನೆರವು ನೀಡಲಾಗುವುದು. ಹಾಲಿ ರ‍್ಯಾಂಕಿಂಗ್ ಮತ್ತು ಈ ಹಿಂದಿನ ಬಹುಮಾನ ಮೊತ್ತ ಗೆಲುವಿನ ಸಾಧನೆಯನ್ನು ಪರಿಗಣಿಸಿ ಆಟಗಾರರಿಗೆ ಧನಸಹಾಯ ನೀಡಲಾಗುವುದು.

ವೈರಸ್ ಪರಿಹಾರ ನಿಧಿಗೆ ತಾರಾ ಆಟಗಾರರು ಹರಾಜು ಪ್ರಕ್ರಿಯೆ, ದೇಣಿಗೆ ಮತ್ತು ವರ್ಚುವಲ್ ಟೆನಿಸ್ ಪಂದ್ಯಗಳ ಮೂಲಕವೂ ಹಣ ನೀಡಬಹುದಾಗಿದೆ. ಸದ್ಯ ಜುಲೈ 13ರವರೆಗೂ ವಿಶ್ವದೆಲ್ಲೆಡೆ ಸ್ಪರ್ಧಾತ್ಮಕ ಟೆನಿಸ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. -ಪಿಟಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net