ಶ್ರೇಯಸ್​ ಅಯ್ಯರ್​ ಭರ್ಜರಿ ಶತಕ; ಸೌತ್ ಆಫ್ರಿಕಾ 2ನೇ ಏಕದಿನ ಪಂದ್ಯ ಗೆದ್ದ ಭಾರತ

India
Published on

ರಾಂಚಿ: ಸೌತ್​ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್​ಗಳಿಂದ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸೌತ್​ ಆಫ್ರಿಕಾ ತಂಡ 7 ವಿಕೆಟ್ ಕಳೆದುಕೊಂಡು 278 ರನ್​ ಗಳಿಸಿತ್ತು. ಸೌತ್​ ಆಫ್ರಿಕಾ ಪರವಾಗಿ ರೀಝಾ ಹೆನ್ಡ್ರಿಕ್ಸ್​ (74 ರನ್) ಹಾಗೂ ಏಡನ್ ಮಾರ್ಕಮ್ (79 ರನ್​) ಅರ್ಧಶತಕದ ನೆರವಿನಿಂದ ಭಾರತಕ್ಕೆ ಸ್ಪರ್ಧಾತ್ಮಕ ಮೊತ್ತ ನೀಡಿತ್ತು. ಭಾರತದ ಪರವಾಗಿ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಬಳಿಸಿದರು.

279ರನ್​ಗಳ ಗುರಿ ಬೆನ್ನು ಹತ್ತಿದ ಭಾರತ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ನಾಯಕ ಶಿಖರ್ ಧವನ್ 13 ರನ್​ ಗಳಿಸಿ ಬೇಗಗೆ ವಿಕೆಟ್ ಒಪ್ಪಿಸಿದರು. ನಂತರ ಶುಭಮನ್ ಗಿಲ್ ಆಟ 28 ರನ್​ ಗಳಿಗೆ ಅಂತ್ಯವಾಯ್ತು.

ಆರಂಭಿಕ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಗೆಲುವಿನತ್ತ ಕೊಂಡು ಹೋಗುವಲ್ಲಿ ಇಶಾನ್ ಕಿಶನ್ ಹಾಗೂ ಶ್ರೇಯಸ್​ ಅಯ್ಯರ್ ಸಫಲರಾದರು. ಕ್ರೀಸ್​ ಕಚ್ಚಿ ನಿಂತ ಇಶಾನ್ ಕಿಶನ್ ಸಿಡಿದರು. 7 ಸಿಕ್ಸ್ ಹಾಗೂ 4 ಫೋರ್​ ಸಹಿತ 93 ರನ್ ಕಲೆಹಾಕಿದರು. ಶತಕದ ಅಂಚಿನಲ್ಲಿ ಎಡವಿದ ಇಶಾನ್ ಜಾರ್ನ್ ಫಾರ್ಚುಯಿನ್ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಇಶಾನ್​ ಕಿಶನ್ ಜತೆ ಉತ್ತಮವಾಗಿಯೇ ಆಡಿಕೊಂಡು ಬಂದ ಶ್ರೇಯಸ್​ ಅಯ್ಯರ್ ಅಜೇಯ ಶತಕ ನೀಡಿ ಮಿಂಚಿದರು. 15 ಫೋರ್​ ಸಹಿತ 113 ರನ್​ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಶಾನ್ ಕಿಶನ್ ಔಟ್ ಆದ ನಂತರ ಬ್ಯಾಟಿಂಗ್​ಗೆ ಬಂದ ಸಂಜು ಸ್ಯಾಮ್ಸನ್​ 30 ರನ್ ಸಿಡಿಸಿ ಮಿಂಚಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net