

ನವ ದೆಹಲಿ: ಅ.7ರಂದು ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಕೆಲವೇ ನಿಮಿಷಗಳ ಅಂತರದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಅನೇಕ ತಿಂಗಳುಗಳಿಂದ ಚಾಲ್ತಿಯಲ್ಲಿದೆ. ಹೀಗಾಗಿ ಏರ್ಪೋರ್ಟ್ನಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಕಾಣಿಸಿಕೊಳ್ಳುತ್ತಿದ್ದಂತೆ ಇವರಿಬ್ಬರು ಒಟ್ಟಿಗೇ ಪ್ರವಾಸ ಮಾಡುತ್ತಿದ್ದಾರೆ ಎಂಬ ಚರ್ಚೆ ಆರಂಭವಾಗಿತ್ತು.
ರಶ್ಮಿಕಾ ಮಾಲ್ಡೀವ್ಸ್ಗೆ ತೆರಳಿದ್ದಾರೆ ಎಂದು ಅವರ ಅಭಿಮಾನಿಗಳು ಮಾತನಾಡಿಕೊಂಡಿದ್ದರು. ಇದೀಗ ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್ನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. ರಶ್ಮಿಕಾ ತಮ್ಮ ಬಿಡುವಿನ ಸಮಯ ಮಾಲ್ಡೀವ್ಸ್ನಲ್ಲಿ ಕಳೆಯುತ್ತಿದ್ದು, ಸಮುದ್ರ ಕಿನಾರೆಯಲ್ಲಿ ತಮ್ಮ ನೆಚ್ಚಿನ ನಟಿಯ ಫೋಟೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಷ್ಟೇ ಅಲ್ಲಾ, ರಶ್ಮಿಕಾಗೆ ಒಂದು ಪ್ರಶ್ನೆಯನ್ನೂ ಕೇಳಿದ್ದಾರೆ.
ರಶ್ಮಿಕಾ ಮಂದಣ್ಣ ಬಿಳಿ ಬಣ್ಣದ ಉಡುಪು ಧರಿಸಿಕೊಂಡು, ಸ್ವಿಮ್ಮಿಂಗ್ ಫೂಲ್ ಪಕ್ಕ ಕುಳಿತುಕೊಂಡಿರುವ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ, ಅಭಿಮಾನಿಗಳು ಈ ಫೋಟೋ ಯಾರು ತೆಗೆದಿರುವುದು ಎಂದು ಪ್ರಶ್ನಿಸಿದ್ದಾರೆ. ಜತೆಗೆ ಇಷ್ಟು ಚಂದದ ಫೋಟೋ ತೆಗೆದಿರುವ ಶ್ರೇಯಸ್ಸು ವಿಜಯ್ ದೇವರಕೊಂಡ ಅವರಿಗೆ ಸಲ್ಲಬೇಕು ಎಂದಿದ್ದಾರೆ.