

Rishabh Pant: ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ನ ನಾಲ್ಕನೇ ದಿನದ ಅಂತ್ಯಕ್ಕೆ ಆಸೀಸ್ ಪಡೆ 333 ರನ್ಗಳಿಂದ ಮುನ್ನಡೆ ಸಾಧಿಸಿದೆ. ಇನ್ನು ಈ ವೇಳೆ ಆಸ್ಟ್ರೇಲಿಯಾ ಬೌಲರ್ನ ಎಸೆತಕ್ಕೆ ಬಹಳ ಸುಲಭವಾಗಿ ವಿಕೆಟ್ ಒಪ್ಪಿಸಿದ ರಿಷಭ್ ಪಂತ್ ಆಟಕ್ಕೆ ಮಾಜಿ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹರ್ಷ ಬೋಗ್ಲೆ ಅವರೊಂದಿಗೆ ಕಮೆಂಟೇಟೆರಿ ಬಾಕ್ಸ್ನಲ್ಲಿ ಕುಳಿತು ಮಾತನಾಡುತ, ಪಂದ್ಯ ವೀಕ್ಷಿಸುತ್ತಿದ್ದ ಗವಾಸ್ಕರ್, ಪಂತ್ ಬ್ಯಾಟ್ ಬೀಸಿದ ಶೈಲಿಗೆ ಲೈವ್ನಲ್ಲಿಯೇ ಹಿಗ್ಗಾಮುಗ್ಗಾ ಜಾಡಿಸಿದ ದೃಶ್ಯ ಸದ್ಯ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಫ್ಲಿಕ್ ಶಾಟ್ ಆಡಲು ಹೋಗಿ ತಮ್ಮ ವಿಕೆಟ್ನ ಸ್ಕಾಟ್ ಬೋಲ್ಯಾಂಡ್ಗೆ ಒಪ್ಪಿಸಿದ ಪಂತ್ ವಿರುದ್ಧ ಕಿಡಿಕಾರಿದ ಗವಾಸ್ಕರ್, "ಇದೆಂಥಾ ಶಾಟ್? ಮೂರ್ಖ. ನೀನು ಡ್ರೆಸ್ಸಿಂಗ್ ರೂಮಿನೊಳಗೆ ಹೋಗಲು ಸಹ ಯೋಚಿಸಬೇಡ ಹೋಗು. ಟೆಸ್ಟ್ ಕ್ರಿಕೆಟ್ ಆಡುವುದು ಅಷ್ಟು ಸುಲಭವಲ್ಲ. ರಿಷಬ್ ಪಂತ್ರಂತಹ ಪ್ರತಿಭಾವಂತ ಆಟಗಾರರು ಆ ಶಾಟ್ ಆಡಿದಾಗ ನಿಜಕ್ಕೂ ಒಪ್ಪಲು ಸಾಧ್ಯವಿಲ್ಲ. ಆತ ಆಡಿದ ಮೊದಲ ಹೊಡೆತದ ಬಗ್ಗೆ ನನಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದ್ರೆ, ಇದನ್ನು ಮಾತ್ರ ನಾನು ಸಹಿಸುವುದಿಲ್ಲ. ಇದು ದೊಡ್ಡ ಕ್ರೀಡಾಂಗಣ. ಡೀಪ್ ಸೈಡ್ನಲ್ಲಿ ಇಬ್ಬರು ಫೀಲ್ಡರ್ಸ್ ಕ್ಯಾಚ್ಗಾಗಿ ಅಕ್ಕಪಕ್ಕದಲ್ಲೇ ನಿಂತಿರುವಾಗ ಇದೆಂಥಾ ಆಟ" ಎಂದು ಹರ್ಷ ಬೋಗ್ಲೆಗೆ ಹೇಳಿದರು.
"ಎಂಸಿಜಿ ಕ್ರೀಡಾಂಗಣ ದೊಡ್ಡದು. ಇಲ್ಲಿ ಅಷ್ಟು ಸುಲಭದ ಶಾಟ್ಗಳನ್ನು ಆಡಲು ಸಾಧ್ಯವಿಲ್ಲ. ಪಂತ್ ಒಬ್ಬ ಅತ್ಯುತ್ತಮ ಬ್ಯಾಟರ್. ಆತ ಅದ್ಭುತ ಶಾಟ್ಸ್ಗಳನ್ನು ಆಡುವ ಸಾಮರ್ಥ್ಯ ಹೊಂದಿರುವ ಕ್ರಿಕೆಟಿಗ. ಇಂತಹ ಸಮಯದಲ್ಲಿ ಬಹಳ ತಾಳ್ಮೆ ಹಾಗೂ ಬುದ್ಧಿವಂತಿಕೆಯ ಆಟ ಇಲ್ಲಿ ಅತೀ ಮುಖ್ಯ. ಅದೇ ಬಾಲ್ನ ಸರಿಯಾಗಿ ಆಡಿದಿದ್ದರೆ ಅದು ಸಿಕ್ಸರ್ ಆಗುತ್ತಿತ್ತು. ಆಗ ನಾನೇ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ದೆ. ಆತ ಕ್ರೀಸ್ ಬಿಟ್ಟಿ ಹೋಗಿದ್ದೇ ತಪ್ಪಾಗಿದ್ದು" ಎಂದು ಗವಾಸ್ಕರ್ ಪಂತ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).