Flight Crash: ಇತ್ತೀಚೆಗಷ್ಟೇ ಸಂಭವಿಸಿದ ಭೀಕರ ಕಜಕಿಸ್ತಾನ್ ವಿಮಾನ ಪತನ ಘಟನೆ ಮಾಸುವ ಮುನ್ನವೇ ಇಂದು (ಡಿ.29) ದಕ್ಷಿಣ ಕೊರಿಯಾದಲ್ಲಿ ಉಂಟಾದ ವಿಮಾನ ಪತನ ಅಕ್ಷರಶಃ ಆತಂಕಕ್ಕೆ ದೂಡಿದೆ. ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಕೊರಿಯಾದ ಜೆಜು ಏರ್ ಫ್ಲೈಟ್ನ 179 ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದು, ಇಬ್ಬರು ಮಾತ್ರ ಪವಾಡದಂತೆ ಬದುಕುಳಿದಿದ್ದಾರೆ.
ಬೋಯಿಂಗ್ 737-800
ಭಾನುವಾರ ಮುಂಜಾನೆ ಈ ಭೀಕರ ದುರಂತ ಸಂಭವಿಸಿದ್ದು, ದಕ್ಷಿಣ ಕೊರಿಯಾದ ಇತಿಹಾಸದಲ್ಲೇ ಮಾರಣಾಂತಿಕ ವಾಯುಯಾನ ದುರಂತಗಳಲ್ಲಿ ಒಂದು ಎಂಬ ಪಟ್ಟಿಗೆ ಸೇರ್ಪಡೆಯಾಗಿದೆ. ಬೋಯಿಂಗ್ 737-800 ಸಂಖ್ಯೆಯ ವಿಮಾನವು ರನ್‌ವೇಯಿಂದ ಸ್ಕಿಡ್ ಆಗಿ ವೇಗವಾಗಿ ಗಾರ್ಡ್‌ರೈಲ್‌ಗೆ ಅಪ್ಪಳಿಸಿದ ಹಿನ್ನಲೆ ವಿಮಾನ ಸ್ಫೋಟಗೊಂಡು, ಸುಟ್ಟು ಕರಕಲಾಗಿದೆ. ವಿಮಾನ ಪತನಗೊಂಡ ಭಯಂಕರ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದ್ದು, ನೆಟ್ಟಿಗರು ಮೃತರನ್ನು ನೆನೆದು ಸಂತಾಪ ಸೂಚಿಸಿದ್ದಾರೆ.
ಕೆಲವೇ ಕೆಲವು ನಿಮಿಷ
ಅಸಲಿಗೆ ವಿಮಾನ ಪತನಕ್ಕೆ ಕಾರಣವೇನು? ಎಂಬುದನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಳಿಸಿರುವ ಅಧಿಕಾರಿಗಳು, ಫ್ಲೈಟ್ ಹೊರಡುವ ಮುನ್ನ ಏನೇನಾಯಿತು ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಮಧ್ಯೆ ತಮ್ಮ ಪ್ರೀತಿ-ಪಾತ್ರರು ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿಯನ್ನು ತಿಳಿದ ಪ್ರಯಾಣಿಕರ ಕುಟುಂಬಸ್ಥರು ಘಟನೆ ನಡೆದ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ಈ ಪೈಕಿ ಓರ್ವ ಪ್ರಯಾಣಿಕನ ಕುಟುಂಬಸ್ಥರು ಮಾಧ್ಯಮಗಳ ಮುಂದೆ ತಮ್ಮ ಸಂಬಂಧಿಕ ಸಾವಿಗೆ ಹತ್ತಿರವಾಗುವ ಕೆಲವು ಕ್ಷಣಗಳ ಮುಂಚಿತವಾಗಿ ಕಳುಹಿಸಿದ ಆ ಒಂದು ಸಂದೇಶವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇದು ನಿಜಕ್ಕೂ ಹಲವರನ್ನು ಬೆರಗಾಗಿಸಿದೆ.
ನನ್ನ ಕೊನೆ ಮಾತುಗಳನ್ನು ಹೇಳಲೇ
ನಮ್ಮವರು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರಿಗೆ ಯಾವ ಮುನ್ಸೂಚನೆ ಸಿಕ್ಕಿತೋ ಏನೋ ಗೊತ್ತಿಲ್ಲ. ಆದರೆ, ದುರಂತ ಸಂಭವಿಸುವ ಕೆಲವೇ ಕೆಲವು ನಿಮಿಷಗಳ ಮುಂಚಿತವಾಗಿ ನಮಗೊಂದು ಸಂದೇಶ ಕಳುಹಿಸಿದರು. ಅದರಲ್ಲಿ, ‘ನಾನು ಪ್ರಯಾಣಿಸುತ್ತಿರುವ ವಿಮಾನದ ರೆಕ್ಕೆಗೆ ಒಂದು ಹಕ್ಕಿ ಸಿಲುಕಿಕೊಂಡಿದೆ’ ಎಂದರು. ಈ ಸಂದೇಶದ ಬೆನ್ನಲ್ಲೇ ಮತ್ತೊಂದರಲ್ಲಿ, ‘ನನ್ನ ಕೊನೆಯ ಮಾತುಗಳನ್ನು ಹೇಳಿ ಮುಗಿಸಲೇ’ ಎಂದು ಕಳುಹಿಸಿದರು. ಇದಾದ ಕೆಲವೇ ಸಮಯದಲ್ಲಿ ವಿಮಾನ ಪತನವಾಯಿತು ಎಂದು ಹೇಳಿದ ಮೃತ ಪ್ರಯಾಣಿಕನ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ವರದಿಯ ಪ್ರಕಾರ, ವಿಮಾನದಲ್ಲಿ 175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು. ಈ ಪೈಕಿ 173 ಪ್ರಯಾಣಿಕರು ದಕ್ಷಿಣ ಕೊರಿಯನ್ನರು ಮತ್ತು ಇಬ್ಬರು ಥಾಯ್ ಪ್ರಜೆಗಳು ಎಂದು ವರದಿಯಾಗಿದೆ. ಅಪಘಾತದಲ್ಲಿ ಇಬ್ಬರು ಬದುಕುಳಿದಿದ್ದಾರೆ. ಅವರಲ್ಲಿ ಒಬ್ಬ ಪ್ರಯಾಣಿಕ ಮತ್ತು ಇನ್ನೊಬ್ಬ ಸಿಬ್ಬಂದಿ. ವಿಮಾನವು ಸಂಪೂರ್ಣವಾಗಿ ನಾಶವಾಗಿದೆ ಎಂದು ಮುವಾನ್ ಅಗ್ನಿಶಾಮಕ ಕೇಂದ್ರದ ಮುಖ್ಯಸ್ಥ ಲೀ ಜಿಯೋಂಗ್-ಹೈಯಾನ್ ಮಾಹಿತಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)
12 ವರ್ಷ ವಯಸ್ಸು, ಮಾಸಿಕ 15 ಸಾವಿರ ರೂ.! ಸೆಂಚುರಿ ಸ್ಟಾರ್ ಬಾಳನ್ನು ಬೆಳಗಿಸಿತು ಆ ತಿಂಗಳ ಹಣ | Nithish