

Nithish Kumar Reddy: ಇಂದು (ಡಿ.28) ಮೆಲ್ಬೋರ್ನ್ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಕಾಂಗರೂ ಪಡೆಯ ಬೌಲರ್ಗಳ ಬೆವರಿಳಿಸಿದ ಟೀಮ್ ಇಂಡಿಯಾದ ಸ್ಟಾರ್ ಯುವ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸುವ ಮೂಲಕ ಕ್ರಿಕೆಟ್ ಲೋಕದಿಂದ ಚಪ್ಪಾಳೆಗಳ ಸುರಿಮಳೆಯನ್ನೇ ಸ್ವೀಕರಿಸಿದ್ದಾರೆ.
ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನ 3ನೇ ದಿನದಂದು ಆಸ್ಟ್ರೇಲಿಯಾ ವಿರುದ್ಧ ಭಾರತ ಕಮ್ಬ್ಯಾಕ್ ಮಾಡಲು ತಮ್ಮ ಬ್ಯಾಟ್ನಿಂದ ಉತ್ತಮ ಕೊಡುಗೆ ನೀಡಿದ 21 ವರ್ಷ ವಯಸ್ಸಿನ ನಿತೀಶ್, ಇಡೀ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಮಾತ್ರವಲ್ಲದೇ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ಭಾರೀ ಸಂತಸ ಮೂಡಿಸಿದ್ದಾರೆ. ಟೆಸ್ಟ್ನಲ್ಲಿ ಚೊಚ್ಚಲ ಶತಕ ಬಾರಿಸಿದ ಪುತ್ರನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪೋಷಕರು, ಮಗನ ಸಾಧನೆ ಕಂಡು ಖುಷಿಯಿಂದ ಕಣ್ಣೀರಿಟ್ಟಿದ್ದಾರೆ. ಇಡೀ ದೇಶವೇ ನಿತೀಶ್ ಸಾಧನೆಯನ್ನು ಕೊಂಡಾಡುತ್ತಿದ್ದು, ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಪುತ್ರನ ಶತಕದಾಟವನ್ನು ನೋಡಲು ಮೈದಾನಕ್ಕೆ ಬಂದಿದ್ದ ನಿತೀಶ್ ರೆಡ್ಡಿ ಅವರ ತಂದೆ ಮುತ್ಯಾಲ ರೆಡ್ಡಿ, ಮಗ ಆಸ್ಟ್ರೇಲಿಯಾ ಪಡೆಯ ಬೌಲರ್ಗಳ ಬೌಲಿಂಗ್ಗೆ ಬೆದರದೆ, ಶತಕ ಬಾರಿಸಿದ್ದನ್ನು ಕಂಡು ಭಾವುಕರಾದರು. ಇನ್ನು ಹೆಂಡತಿ, ಮಗಳೊಂದಿಗೆ ಪುತ್ರನನ್ನು ಕಣ್ತುಂಬಿಕೊಳ್ಳಲು ನಿತೀಶ್ ಉಳಿದಿದ್ದ ಕೊಠಡಿಗೆ ತೆರಳಿದ ಮುತ್ಯಾಲ, ಮಗನನ್ನು ತಬ್ಬಿ, ಮುದ್ದಾಡಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿವೆ. ಒಂದೆಡೆ ಯುವ ಕ್ರಿಕೆಟಿಗನ ಸಾಧನೆಯನ್ನು ಜನರು ಕೊಂಡಾಡುತ್ತಿದ್ದರೆ, ಅತ್ತ ನಿತೀಶ್ 12 ವರ್ಷ ವಯಸ್ಸಿನಲ್ಲಿದ್ದಾಗ ಕ್ರಿಕೆಟ್ಗಾಗಿ ಪಟ್ಟ ಕಷ್ಟ, ಆತನ ಕುಟುಂಬದ ತ್ಯಾಗಗಳನ್ನು ಭಾರತದ ಮಾಜಿ ವಿಕೆಟ್ ಕೀಪರ್ ಮತ್ತು ಮಾಜಿ ಆಯ್ಕೆಗಾರ ಎಂ.ಎಸ್.ಕೆ ಪ್ರಸಾದ್ ಇಲ್ಲಿ ನೆನಪಿಸಿಕೊಂಡಿದ್ದಾರೆ.
ಅಂದು ನಿತೀಶ್ 12 ವರ್ಷ ವಯಸ್ಸಿನ ಹುಡುಗ. ಈ ಸಮಯದಲ್ಲಿ ತನ್ನ ಮಗ ಒಬ್ಬ ಒಳ್ಳೆಯ ಕ್ರಿಕೆಟರ್ ಆಗಬೇಕು ಎಂಬ ಮಹಾದಾಸೆ ಹೊತ್ತಿದ್ದ ಅವರ ತಂದೆ ಮುತ್ಯಾಲ, ತಮ್ಮ ಪುತ್ರನ ಪ್ರತಿಭೆಗೆ ಸಹಕಾರ ನೀಡಿ, ಆತನಿಗೆ ಸಹಾಯ ನೀಡುವಂತೆ ಪ್ರಸಾದ್ರನ್ನು ಕೋರಿದರು. ಆಗ ನಿತೀಶ್‌ಗೆ ಕೆಲವು ಪ್ರಶ್ನೆಗಳನ್ನು ಕೇಳಿ, ನೆಟ್ಸ್‌ನಲ್ಲಿ ಬ್ಯಾಟ್ ಮಾಡಲು ಹೇಳಿದ ಪ್ರಸಾದ್, ಅಲ್ಲಿ ಯುವ ಬ್ಯಾಟರ್ ತನ್ನ ವೃತ್ತಿಪರ ಸ್ಟ್ರೋಕ್ ಮತ್ತು ಶಿಸ್ತುಬದ್ಧ ಆಟಕ್ಕೆ ಬೆರಗಾಗಿದ್ದರು. ವಿಕೆಟ್-ಟು-ವಿಕೆಟ್ ಬೌಲಿಂಗ್‌ನಿಂದ ಆತ ಪ್ರಭಾವಿ ಆಟಗಾರ ಎಂಬುದನ್ನು ಕಂಡುಕೊಂಡರು.
ನಿತೀಶ್ರ ಪ್ರತಿಭೆಯನ್ನು ಗುರುತಿಸಿದ ಪ್ರಸಾದ್, ಅವರನ್ನು ಆಂಧ್ರಪ್ರದೇಶ ಕ್ರಿಕೆಟ್ ಮ್ಯಾನೇಜ್‌ಮೆಂಟ್‌ಗೆ ಪರಿಚಯಿಸಿದರು. ಅಂದಿನಿಂದ ನಿತೀಶ್ರ ಪ್ರತಿಭೆಯನ್ನು ಬೆಳೆಸಲು ಮುಂದಾದ ಮ್ಯಾನೇಜ್ಮೆಂಟ್, ಸಂಘದಿಂದ ಹಣಕಾಸಿನ ನೆರವು ನೀಡಿತು. ಪ್ರತಿ ತಿಂಗಳಿಗೆ 15,000 ರೂ. ಹಣವನ್ನು ನಿತೀಶ್ ರೆಡ್ಡಿಯ ಕ್ರಿಕೆಟ್ ಮತ್ತು ಶೈಕ್ಷಣಿಕ ಅಗತ್ಯತೆಗೆ ಬಳಕೆ ಮಾಡಲು ಮೀಸಲಿಟ್ಟಿತು. ಆತ ಒಂದು ಉತ್ತಮ ಹಂತ ತಲುಪುವವರೆಗೂ ನೆರವು ನೀಡಬೇಕು ಎಂದು ಮ್ಯಾನೇಜ್ಮೆಂಟ್ ನಿರ್ಧರಿಸಿತ್ತು. ಅದರಂತೆಯೇ ನಡೆದುಕೊಂಡಿತು. ಇಂದು ಅವರ ಸಾಧನೆ ಅವರ ಕುಟುಂಬ ಮತ್ತು ನನಗೆ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ ಎಂದು ಪ್ರಸಾದ್ ಹೇಳಿದ್ದಾರೆ.
"ಇಡೀ ದೇಶ ಮತ್ತು ಆಂಧ್ರ ಕ್ರಿಕೆಟ್ ಈ ಹುಡುಗನ ಬಗ್ಗೆ ಹೆಮ್ಮೆಪಡುತ್ತದೆ. ಇದು ಅದ್ಭುತ ಸಾಧನೆ. ನಿತೀಶ್ ಬಡತನದ ಹಿನ್ನೆಲೆಯಿಂದ ಬಂದವರು. ಕಷ್ಟಗಳನ್ನು ಮೆಟ್ಟಿ ಇಂದು ದೊಡ್ಡ ಮಟ್ಟದ ಸಾಧನೆಗೈದಿದ್ದಾರೆ. ಅವರನ್ನು ಬೆಂಬಲಿಸಲು ಅಸಾಧಾರಣ ತ್ಯಾಗ ಮಾಡಿದ ಅವರ ಕುಟುಂಬಕ್ಕೆ ನನ್ನ ವಂದನೆ. ನಿತೀಶ್ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಆಂಧ್ರ ಕ್ರಿಕೆಟ್, ಅವರು ಒಂದು ನಿರ್ದಿಷ್ಟ ಹಂತಕ್ಕೆ ಬರುವವರೆಗೂ ಪ್ರತಿ ತಿಂಗಳು 15,000 ರೂ. ನೀಡಲು ನಿರ್ಧರಿಸಿತ್ತು. ನನ್ನ ಬಳಿ ನಿತೀಶ್ ಬಂದಾಗ ಆತನಿಗೆ ಕೇವಲ 12 ವರ್ಷ ವಯಸ್ಸು" ಎಂದಿದ್ದಾರೆ ಪ್ರಸಾದ್,(ಏಜೆನ್ಸೀಸ್).