

Maruti 800: ಆರ್ಥಿಕ ಸುಧಾರಣೆಯ ಹರಿಕಾರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರು ನಿನ್ನೆ (ಡಿ. 26) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಭಾರತದ ಹಣಕಾಸು ಸಚಿವರಾಗಿ, ಆರ್ಬಿಐ ಗವರ್ನರ್, ಯೋಜನಾ ಆಯೋಗ ಮುಖ್ಯಸ್ಥ ಸೇರಿದಂತೆ ಎರಡು ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಡಾ. ಮನಮೋಹನ್ ಸಿಂಗ್ ಅವರು ಇನ್ನಿಲ್ಲ ಎಂಬ ಸುದ್ದಿ ಭಾರತೀಯರಲ್ಲಿ ಅತೀವ ದುಃಖವನ್ನು ತಂದೊಡ್ಡಿದೆ. ತಮ್ಮ ನೆಚ್ಚಿನ ನಾಯಕರಿಗೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದು, ದೇಶವ್ಯಾಪಿ ಏಳು ದಿನ ಶೋಕಾಚರಣೆ ನಡೆಯಲಿದೆ.
ಅಂದು ಮನಮೋಹನ್ ಸಿಂಗ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಸಮಯದಲ್ಲಿ ನಿಯೋಜಿಸಲಾದ ಮುಖ್ಯ ವಿಶೇಷ ರಕ್ಷಣಾ ಪಡೆಯಲ್ಲಿ (SPG) ಸೇವೆ ಸಲ್ಲಿಸಿದ್ದ ಮಾಜಿ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಅರುಣ್ ಅಸಿಮ್, ಮನಮೋಹನ್ ಸಿಂಗ್ ಅವರು ಎಷ್ಟು ಭಾವುಕ ಮತ್ತು ಸರಳ ವ್ಯಕ್ತಿತ್ವದ ಮನುಷ್ಯ ಎಂಬುದಕ್ಕೆ ಕೆಲವು ಘಟನೆಗಳೇ ಸಾಕ್ಷಿ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಒಂದು ಉತ್ತಮ ನಿದರ್ಶನ ಎಂದರೆ ಅವರ ಬಳಿಯಿದ್ದ ಹಳೆಯ ಮಾರುತಿ 800 ಕಾರು ಎಂದಿದ್ದಾರೆ. ಅಷ್ಟಕ್ಕೂ ಮಾರುತಿ ಕಾರಿಗೂ ಮಾಜಿ ಪ್ರಧಾನಿಗೂ ಇದ್ದ ಅವಿನಾಭಾವ ಸಂಬಂಧವೇನು?
ಪ್ರಸ್ತುತ ಉತ್ತರ ಪ್ರದೇಶದ ಕನೌಜ್ ಸದರ್‌ನ ಶಾಸಕರಾಗಿರುವ ಅಸೀಮ್, ತಮ್ಮ ನೆಚ್ಚಿನ ನಾಯಕರಾದ ಡಾ. ಸಿಂಗ್ರ ಮರಣದ ಸುದ್ದಿ ತಿಳಿದು ಅತೀವ ದುಃಖ ವ್ಯಕ್ತಪಡಿಸಿದರು. ಈ ವೇಳೆ ಅವರೊಂದಿಗೆ ಕಳೆದ ಕ್ಷಣಗಳು, ನೆನಪಿನ ಬುತ್ತಿಯಲ್ಲಿ ಮಾರುತಿ 800 ಕಾರು ಮತ್ತು ಅವರ ಮಧ್ಯೆಯಿದ್ದ ಸಂಬಂಧದ ಪುಟವನ್ನು ಇಲ್ಲಿ ಮೆಲುಕು ಹಾಕಿದ್ದಾರೆ. "ಮನಮೋಹನ್ ಸಿಂಗ್ ಅವರು ತಮ್ಮ ಬಳಿ ಒಂದೇ ಒಂದು ಕಾರು ಹೊಂದಿದ್ದರು. ಅದೇ ಮಾರುತಿ 800. ಇದು ಅವರ ನಿವಾಸದಲ್ಲಿ ನಿಲುಗಡೆ ಮಾಡಲಾದ ಹೊಳೆಯುವ, ಕಪ್ಪು ಬಿಎಂಡಬ್ಲ್ಯು ಕಾರಿನ ಹಿಂದೆಯೇ ನಿಲ್ಲಿಸಲಾಗಿದೆ. ನಾನು ಅವರನ್ನು ಭೇಟಿಯಾದಗಲೆಲ್ಲಾ ಅವರು ನನ್ನ ಬಳಿ ಹೇಳುತ್ತಿದ್ದ ಪದ ಒಂದೇ, ಇದು ನನ್ನದು ಎಂದು" ಎಂದರು.
"ತಮ್ಮ ಬಳಿಯಿದ್ದ ಕಪ್ಪು ಬಣ್ಣದ ಬಿಎಂಡಬ್ಲ್ಯೂ ಕಾರನ್ನು ತೋರಿಸಿ, ನೋಡು ಈ ಕಾರು ನನ್ನ ಐಷಾರಾಮಿಗಾಗಿ ಅಲ್ಲ, ಬದಲಿಗೆ ತನ್ನ ಭದ್ರತೆಗಾಗಿ ಇರುವುದು. ಕೋಟಿ ಮೌಲ್ಯದ ಕಾರು ಪ್ರಧಾನಿಯದ್ದು, ನನ್ನ ಕಾರು ಈ ಮಾರುತಿ 800" ಎಂದು ಡಾ. ಸಿಂಗ್ ಹೇಳುತ್ತಿದ್ದರು. ಅವರು ತಮ್ಮ ಸರಳತೆಗೆ ಹೆಚ್ಚು ಹೆಸರುವಾಸಿ. ಒಬ್ಬ ಸಾಮಾನ್ಯ ಮನುಷ್ಯನಂತೆ ಬದುಕಲು ಅವರು ಬಯಸುತ್ತಿದ್ದರು ಹಾಗೂ ಸಾಮಾನ್ಯ ಜನರ ಬದುಕು ಅವರಲ್ಲಿ ಪದೇ ಪದೇ ಕಾಡುತ್ತಿತ್ತು ಎಂದು ಅಸೀಮ್ ಈ ಸಂದರ್ಭದಲ್ಲಿ ಡಾ. ಸಿಂಗ್ರ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ,(ಏಜೆನ್ಸೀಸ್).