ಮನಮೋಹನ್ ಸಿಂಗ್ ಆಡಳಿತವಧಿಯಲ್ಲಿ ಭಾರತಕ್ಕೆ ದೊರೆತ ಪ್ರಮುಖ ಯೋಜನೆಗಳಿವು | Manmohan Singh

ವಿಜಯವಾಣಿ - 2024-12-27T080214.438
Published on

Manmohan Singh: ಮಾಜಿ ಪ್ರಧಾನಿ, ಕಾಂಗ್ರೆಸ್‌ನ ಧೀಮಂತ ನಾಯಕ ಡಾ. ಮನಮೋಹನ್ ಸಿಂಗ್ (92) ಅವರು ನಿನ್ನೆ (ಡಿ.26) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗಷ್ಟೇ ಏಮ್ಸ್​ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ತಡರಾತ್ರಿ ಚಿಕಿತ್ಸೆ ಫಲಿಸದೆ ಅವರು ವಿಧಿವಶರಾದರು. ದೇಶದ ಆರ್ಥಿಕತೆಗೆ ಸುಭದ್ರ ಅಡಿಪಾಯ ಹಾಕಿಕೊಟ್ಟ ನಾಯಕ ಇನ್ನಿಲ್ಲ ಎಂಬ ಸುದ್ದಿಗೆ ರಾಜಕೀಯ ನಾಯಕರು ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ಆರ್ಥಿಕ ವಿಷಯದ ಪರಿಣತ

ರಾಜಕೀಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ, 2024ರ ಏಪ್ರಿಲ್ 03ರಂದು ರಾಜ್ಯಸಭೆಯಿಂದ ನಿವೃತ್ತಿ ಪಡೆದಿದ್ದರು. ತಮ್ಮ ಆಡಳಿತಾವಧಿಯಲ್ಲಿ ಭಾರತೀಯ ಅರ್ಥ ವ್ಯವಸ್ಥೆಯ ನೋಟವನ್ನೇ ಬದಲಾಯಿಸುವಲ್ಲಿ ಪ್ರಮುಖ ಹಾಗೂ ಬಹುಮುಖ್ಯ ಪಾತ್ರ ವಹಿಸಿದ ಮನಮೋಹನ್ ಸಿಂಗ್, ಆರ್ಥಿಕ ವಿಷಯದ ಪರಿಣತರೊಬ್ಬರಾಗಿ ಗುರುತಿಸಿಕೊಂಡು ಅಲ್ಲಿಂದ ಭಾರತದ ಪ್ರಧಾನಿಯಾಗಿದ್ದು ವಿಶೇಷ. ಆರ್‌ಬಿಐ ಗವರ್ನರ್‌, ಅರ್ಥಶಾಸ್ತ್ರಜ್ಞ, ವಿತ್ತ ಸಚಿವ ಮತ್ತು ಪ್ರಧಾನಿಯಾಗಿ ಸಿಂಗ್‌ ಅವರ ಕೊಡುಗೆ ದೇಶಕ್ಕೆ ಅನನ್ಯ. ಇನ್ನು ಆರ್ಥಿಕ ಕ್ರಾಂತಿಕ ಹರಿಕಾರರ ಕೆಲವು ಕುತೂಹಲಕರ ಸಂಗತಿಗಳು ಇಲ್ಲಿವೆ ತಿಳಿಯಿರಿ.

Manmohan Singh

ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ, ಮನಮೋಹನ್​ ಸಿಂಗ್ ಅವರು 1991ರಿಂದ ರಾಜ್ಯಸಭೆಯ ಸದಸ್ಯರಾಗಿದ್ದರು. 1998 ಮತ್ತು 2004ರ ನಡುವೆ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು. ಏಪ್ರಿಲ್ 03. 2024ರಲ್ಲಿ ರಾಜ್ಯಸಭೆಯಿಂದ ನಿವೃತ್ತಿ ಪಡೆದ ಮನಮೋಹನ್ ಸಿಂಗ್​, ತಮ್ಮ ಆಡಳಿತವಧಿಯಲ್ಲಿ ಜನಪರ ಕೆಲಸಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ಸಾಕಷ್ಟು ಯೋಜನೆಗಳನ್ನು ದೇಶದ ಜನತೆಗೆ ಪರಿಚಯಿಸಿದರು.

2005ರಲ್ಲಿ ನರೇಗಾ ಯೋಜನೆ

ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಒಂದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (MGNREGA) (2005), ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 100 ದಿನಗಳ ಕೂಲಿ ಉದ್ಯೋಗವನ್ನು ಖಾತರಿಪಡಿಸುವ ಪ್ರಮುಖ ಕಾರ್ಯಕ್ರಮವಾಗಿ ಜಾರಿಯಾಯಿತು. ಗ್ರಾಮೀಣ ಭಾಗದ ಜನರಿಗೆ ಮೂಲಸೌಕರ್ಯ ಒದಗಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಮಾಹಿತಿ ಹಕ್ಕು ಕಾಯಿದೆ (ಆರ್​ಟಿಐ)

ಈ ಯೋಜನೆ ಸಾರ್ವಜನಿಕ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುವ ನಾಗರಿಕರ ಹಕ್ಕನ್ನು ಪರಿಚಯಿಸಿತು. ಆರ್​ಟಿಐ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸಲು ಮನಮೋಹನ್ ಸಿಂಗ್​ ನೇತೃತ್ವದ ಸರ್ಕಾರವು 2005ರಲ್ಲಿ ಮಾಹಿತಿ ಹಕ್ಕು ಕಾಯಿದೆಯನ್ನು ಚಾಲ್ತಿಗೆ ತಂದಿತು. 2013ರಲ್ಲಿ ಅವರ ಸರ್ಕಾರವು ಭಾರತದ ಜನಸಂಖ್ಯೆಯ ಸರಿಸುಮಾರು ಮೂರನೇ ಎರಡರಷ್ಟು ಜನರಿಗೆ ಸಬ್ಸಿಡಿ ಆಹಾರ ಧಾನ್ಯಗಳನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಸಹ ಪ್ರಾರಂಭಿಸಿತು.

ಆಧಾರ್​ ಕಾರ್ಡ್​

ಮನಮೋಹನ್ ಸಿಂಗ್ ಅವರ ಆಡಳಿತವಧಿಯಲ್ಲಿ 'ಆಧಾರ್​- ಇದು ಶ್ರೀಸಾಮಾನ್ಯನ ಅಧಿಕಾರ' ಎಂಬ ಹೆಸರಿನ ಕಾರ್ಡ್​ ಅನ್ನು ಜಾರಿಗೆ ತರಲಾಯಿತು. ಮಾಜಿ ಪ್ರಧಾನಿಯ ನೇತೃತ್ವದಲ್ಲಿ ಆಧಾರ್​ ಕಾರ್ಡ್​ ಜನರ ಬಹುಮುಖ್ಯ ಹಾಗೂ ದೈನಂದಿನ ಕೆಲಸಗಳಿಗೆ ಮೂಲ ದಾಖಲಾತಿಯನ್ನಾಗಿ ಮಾಡಲಾಯಿತು. ಇಂದು ಪ್ರತಿಯೊಂದಕ್ಕೂ ಆಧಾರ್​ ಅತ್ಯವ್ಯಶಕವಾಗಿದೆ ಎಂಬುದು ಗಮನಾರ್ಹ.

ಕೃಷಿ ಸಾಲ ಮನ್ನಾ

ರೈತರ ಮೇಲೆ ಒತ್ತಡ ಹೆಚ್ಚಿಸಿದ್ದ ಸಾಲವನ್ನು ಮನ್ನಗೊಳಿಸಲು ಅಂದಿನ ಮನಮೋಹನ್ ಸಿಂಗ್​ರ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಿತ್ತು. 60 ಸಾವಿರ ಕೋಟಿ ರೂ.ನಷ್ಟು ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ಪರಿಹಾರ ಘೋಷಿಸಿದ್ದರು.

Manmohan Singh

ಹಣಕಾಸು ಸಚಿವ

1991 ಮತ್ತು 1996ರ ನಡುವೆ ನರಸಿಂಹ ರಾವ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಭಾರತದ ಹಣಕಾಸು ಸಚಿವರಾಗಿ ಐದು ವರ್ಷಗಳನ್ನು ಪೂರೈಸಿದ ಮನಮೋಹನ್ ಸಿಂಗ್​, ದೇಶದ ಆರ್ಥಿಕ ಸುಧಾರಣೆಗಳ ಸಮಗ್ರ ನೀತಿಯನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ವತಂತ್ರ ಭಾರತದ ಆರ್ಥಿಕ ಇತಿಹಾಸಕ್ಕೆ ಒಂದು ಹೊಸ ತಿರುವು ಕೊಟ್ಟ ಅವರು, ಭಾರತವನ್ನು ಉದಾರೀಕರಣದ ದಾರಿಯಲ್ಲಿ ತೆಗೆದುಕೊಂಡು ಹೋದದ್ದು ಈಗ ಇತಿಹಾಸ.

2ನೇ ಅತ್ಯುನ್ನತ ನಾಗರಿಕ ಗೌರವ

ಸಾರ್ವಜನಿಕ ವೃತ್ತಿಜೀವನದಲ್ಲಿ ಮನಮೋಹನ್​ ಸಿಂಗ್ ಅವರಿಗೆ ನೀಡಲಾದ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳಲ್ಲಿ ಅತ್ಯಂತ ಪ್ರಮುಖವಾದ ಪ್ರಶಸ್ತಿ ಎಂದರೆ 1987ರಲ್ಲಿ ದೊರೆತ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪದ್ಮವಿಭೂಷಣ ಪ್ರಶಸ್ತಿ. ದೇಶಕ್ಕೆ ಮನಮೋಹನ್ ಸಿಂಗ್ ಅವರ ಕೊಡುಗೆಗಳು ಅಪಾರ ಹಾಗೂ ಮರೆಯಲಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net