

ಮುಂಬೈ: ಮಹಾರಾಷ್ಟ್ರದ ಸರ್ಕಾರಿ ಸ್ವಾಮ್ಯದ ಕ್ರೀಡಾ ಸಂಕೀರ್ಣದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ 23 ವರ್ಷದ ಯುವಕನೊಬ್ಬ, ಮಾಸಿಕ 13,000 ರೂ. ಸಂಬಳಕ್ಕೆ 4 ಬಿಎಚ್ಕೆ ಫ್ಲಾಟ್, ಐಷಾರಾಮಿ ಕಾರುಗಳು ಮತ್ತು ಇತರೆ ದುಬಾರಿ ಮೌಲ್ಯದ ವಸ್ತುಗಳನ್ನು ಖರೀದಿಸಿರುವುದು ಇದೀಗ ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ. ತನ್ನ ಪ್ರೇಯಸಿಗಾಗಿ 4 ಬಿಎಚ್ಕೆ (4BHK) ಫ್ಲಾಟ್ ಖರೀದಿ ಮಾಡಿರುವ ಈತನ ಸಂಬಳ ಕೇವಲ 13 ಸಾವಿರ ಇರಬೇಕಾದರೆ, ಇಷ್ಟೆಲ್ಲ ಹೇಗೆ ಸಾಧ್ಯವಾಯಿತು ಎಂಬುದನ್ನು ತಿಳಿಯಲು ಆತನ ಬೆನ್ನತ್ತಿದ ಖಾಕಿ ಪಡೆ, ಕಡೆಗೂ ಸ್ಫೋಟಕ ಸತ್ಯವನ್ನು ಹೊರತರುವಲ್ಲಿ ಯಶಸ್ವಿಯಾಗಿದೆ.
ಛತ್ರಪತಿ ಸಂಭಾಜಿನಗರದಲ್ಲಿರುವ ವಿಭಾಗೀಯ ಕ್ರೀಡಾ ಸಂಕೀರ್ಣದ ಗುತ್ತಿಗೆ ಸಿಬ್ಬಂದಿಯಾಗಿದ್ದ ಆರೋಪಿ ಹರ್ಷಲ್ ಕುಮಾರ್ ಕ್ಷೀರಸಾಗರ್, ಸಂಸ್ಥೆಯ ಹೆಸರಿನಲ್ಲಿ ನಡೆದ ವಹಿವಾಟಿನಲ್ಲಿ ಬರೋಬ್ಬರಿ 21 ಕೋಟಿ ರೂ. ಹಣವನ್ನು ದೋಚಿದ್ದಾನೆ. ಈ ಹಣದಲ್ಲೇ ತನ್ನ ಪ್ರೇಯಸಿಗೆ 4 ಬಿಎಚ್ಕೆ ಫ್ಲಾಟ್, ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾನೆ. ಈ ವಂಚನೆಯನ್ನು ಪೊಲೀಸರು ಬಯಲಿಗೆಳೆಯುತ್ತಿದ್ದಂತೆ ಹರ್ಷಲ್ ಪರಾರಿಯಾಗಿದ್ದಾನೆ. ಸಂಸ್ಥೆಯ ಕಣ್ಣಿಗೆ ಬಟ್ಟೆ ಕಟ್ಟಿ, ಆಟವಾಡಿದ ಹರ್ಷಲ್ಗೆ ಬೆಂಬಲ ನೀಡಿದ ಆರೋಪದ ಮೇಲೆ ಆತನ ಸಹೋದ್ಯೋಗಿ ಯಶೋದಾ ಶೆಟ್ಟಿ ಮತ್ತು ಆಕೆಯ ಪತಿ ಬಿಕೆ ಜೀವನ್ರನ್ನು ಪೊಲೀಸರು ಬಂಧಿಸಿದ್ದಾರೆ.
23ರ ಹರೆಯದ ಯುವಕ ಹಣ ಕಬಳಿಸಲು ಹೂಡಿದ್ದ ಮಾಸ್ಟರ್ ಪ್ಲ್ಯಾನ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹರ್ಷಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಹಳೆಯ ಲೆಟರ್‌ಹೆಡ್ ಅನ್ನು ಬ್ಯಾಂಕ್‌ಗೆ ಇಮೇಲ್ ಮಾಡಿದ್ದಾನೆ. ಕ್ರೀಡಾ ಸಂಕೀರ್ಣದ ಖಾತೆಗೆ ಲಿಂಕ್ ಮಾಡಲಾದ ಇಮೇಲ್ ವಿಳಾಸದಲ್ಲಿ ಬದಲಾವಣೆಗೆ ಕೋರಿದ್ದಾನೆ. ಕ್ರೀಡಾ ಸಂಕೀರ್ಣದ ಖಾತೆಯಂತೆಯೇ ವಿಳಾಸದೊಂದಿಗೆ ಹೊಸ ಇಮೇಲ್ ಖಾತೆಯನ್ನು ತೆರೆದಿದ್ದಾನೆ. ಇದರಲ್ಲಿ ಎಲ್ಲವೂ ಇದ್ದಂತೆ ಇದ್ದು, ಕೇವಲ ಒಂದೇ ಒಂದು ಅಕ್ಷರ ಮಾತ್ರ ಬದಲಾಗಿದೆ. ಈ ಇಮೇಲ್ ವಿಳಾಸವನ್ನು ಕ್ರೀಡಾ ಸಂಕೀರ್ಣದ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿದ ಹರ್ಷಲ್, ಅದಕ್ಕೆ ಬರುವ ಒಟಿಪಿಗಳು ಮತ್ತು ವಹಿವಾಟುಗಳಿಗೆ ಅಗತ್ಯವಿರುವ ಇತರೆ ಮಾಹಿತಿಯನ್ನು ಪಡೆಯಲು ಏನೆಲ್ಲಾ ವ್ಯವಸ್ಥೆ ಮಾಡಬೇಕೋ ಅದನ್ನೆಲ್ಲ ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಕ್ರೀಡಾ ಸಂಕೀರ್ಣ ಸಮಿತಿಯ ಬ್ಯಾಂಕ್ ಖಾತೆಯಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸಿದ್ದ ಈತ, ಈ ವರ್ಷದ ಜುಲೈ 1ರಿಂದ ಡಿಸೆಂಬರ್ 7ರ ನಡುವಿನಲ್ಲಿ ಬರೋಬ್ಬರಿ 21 ಕೋಟಿ ರೂ. ಹಣವನ್ನು ದೋಚಿದ್ದು, ಅದನ್ನು 13 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾನೆ. ಈ ಹಣವನ್ನು 1.2 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯೂ ಕಾರು, 1.3 ಕೋಟಿ ರೂ. ಬೆಲೆಯ ಎಸ್ಯುವಿ ಮತ್ತು 32 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯೂ ಬೈಕ್ ಖರೀದಿಸಲು ಬಳಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಭಾರಿ ವಂಚನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಹಣ ದೋಚಲು ಬಳಸಿದ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಹರ್ಷಲ್‌ನನ್ನು ಬಂಧಿಸಲು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಐಷಾರಾಮಿ ವಾಹನಗಳು ಮತ್ತು ದುಬಾರಿ ಮೌಲ್ಯದ ಚಿನ್ನಾಭರಣಗಳು ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್).