

ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂಸ್ಥಾಪಕರ ದಿನಾಚರಣೆಯನ್ನು ಡಿ.28ರಂದು ಸಂಜೆ 4.30ಕ್ಕೆ ಸಂಘದ ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಭೂತಪೂರ್ವ ಸೇವೆ ಸಲ್ಲಿಸಿದ ಶಿವಮೊಗ್ಗದ ಮಾನಸ ವೆಟ್ ಫಾರ್ಮ್(ಶ್ರೀ ಗಜಾನನ ಹೆಗಡೆ ಮತ್ತು ಪಾಲುದಾರ), ಕನ್ನಿಕಾ ಟ್ರೇಡರ್ಸ್(ಎಚ್.ಎನ್.ನಂಜುಂಡರಾಜು ಶೆಟ್ಟಿ ಮತ್ತು ಪಾಲುದಾರರು), ಶಾಸ್ತ್ರಿ ಆಟೋಮೊಬೈಲ್( ಶಿವಮೊಗ್ಗದ ಶಾಸ್ತ್ರಿ ಆಟೋಮೊಬೈಲ್ಸ್ ಮಾಲೀಕ ಪ್ರಶಾಂತ್ ಶಾಸ್ತ್ರಿ) ಅವರಿಗೆ 2024ನೇ ಸಾಲಿನ ವಾಣಿಜ್ಯೋದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಶಿವಮೊಗ್ಗದ ಆಡಿಟರ್ ಮತ್ತು ಟ್ಯಾಕ್ಸ್ ಪ್ರಾಕ್ಟೀಷನರ್ ಎಸ್.ಬಿ.ಹನುಮಂತಪ್ಪ ಅವರಿಗೆ ವಿಶೇಷ ಪುರಸ್ಕಾರ ನೀಡಲಾಗುವುದು ಎಂದರು.
ಸಂಘವು 61 ವರ್ಷಗಳಿಂದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು ಅಂದು ಸಂಘದ ಮಾಜಿ ಅಧ್ಯಕ್ಷರ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಸಂಘದ ಮಾಜಿ ಅಧ್ಯಕ್ಷ ಟಿ.ಆರ್.ಅಶ್ವತ್ಥ್‌ನಾರಾಯಣ ಶೆಟ್ಟಿ, ಉಪಾಧ್ಯಕ್ಷ ಜಿ.ವಿಜಯಕುಮಾರ್, ಗೌರವ ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ನಿರ್ದೇಶಕರಾದ ಎಸ್.ಪಿ.ಶಂಕರ್, ಡಾ. ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ಸುದ್ದಿಗೋಷ್ಠಿಯಲ್ಲಿದ್ದರು.