

ಪುತ್ತೂರು ಗ್ರಾಮಾಂತರ: ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಒಳಮೊಗ್ರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಂಬುಲೆನ್ಸ್ ವ್ಯವಸ್ಥೆ ಹಾಗೂ ಸುಂದರ ಉದ್ಯಾನವನ ವ್ಯವಸ್ಥೆ ಆಗಬೇಕು ಎಂದು ಒಳಮೊಗ್ರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಬೇಡಿಕೆ ಮುಂದಿಟ್ಟರು. ಗ್ರಾಪಂ ಅಧ್ಯಕ್ಷೆ ಹಾಗೂ ಆಡಳಿತ ಮಂಡಳಿ, ಅಧಿಕಾರಿ ವರ್ಗ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಡದೆ ಪಕ್ಷ ಬೇಧವಿಲ್ಲದೆ ಗ್ರಾಮದಲ್ಲಿ ಹಲವು ಅಭಿವೃದ್ಧಿ ಮಾಡುವ ಮೂಲಕ ಒಂದು ಮಾದರಿ ಗ್ರಾಪಂ ಆಗಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದರು.
ಒಳಮೊಗ್ರು ಗ್ರಾಮಸಭೆ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಯಿತು.
ಒಳಮೊಗ್ರು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಇದ್ದು, ಹಲವು ವರ್ಷಗಳಿಂದ ಈ ಬೇಡಿಕೆ ನಾವು ಮುಂದಿಡುತ್ತಾ ಬಂದಿದ್ದೇವೆ. ಈ ಬಗ್ಗೆ ಆರೋಗ್ಯ ಇಲಾಖೆಗೆ ಪತ್ರ ಬರೆಯುವಂತೆ ಕೆ.ಮಹಮ್ಮದ್ ಅಡ್ಕ ಒತ್ತಾಯಿಸಿದರು. ಧ್ವನಿಗೂಡಿಸಿದ ನಿತೀಶ್ ಕುಮಾರ್, ಗ್ರಾಮದಲ್ಲಿ ಒಂದು ಸುಂದರ ಉದ್ಯಾನವನ ನಿರ್ಮಿಸಬೇಕು. 108 ಆಂಬುಲೆನ್ಸ್ ವ್ಯವಸ್ಥೆಯೂ ಆಗಬೇಕು ಎಂದರು. ಈ ಕುರಿತು ಸಂಬಂಧಪಟ್ಟವರಿಗೆ ಪತ್ರ ಬರೆಯಲು ನಿರ್ಣಯಿಸಲಾಯಿತು.
ಆನ್ಲೈನ್ನಿಂದ ಸಮಸ್ಯೆ: ಇತ್ತೀಚಿನ ಶಾಲಾ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ವ್ಯವಸ್ಥೆಯಿಂದಾಗಿ ಬಹಳಷ್ಟು ವಿದ್ಯಾರ್ಥಿಗಳು ಸ್ಕಾಲರ್ಶಿಪ್ನಿಂದ ವಂಚಿತರಾಗುತ್ತಿದ್ದಾರೆ. ಮೊದಲಿನ ಮ್ಯಾನ್ಯುವೆಲ್ ರೀತಿಯನ್ನೇ ಮತ್ತೆ ತರಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಶಿಕ್ಷಕ ರಾಮಣ್ಣ ರೈ ಆಗ್ರಹಿಸಿದರು.
ಅಂಗವಿಕಲ ಮಕ್ಕಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಸವಲತ್ತು ಬುದ್ದಿಮಾಂದ್ಯ ಮಕ್ಕಳಿಗೂ ಸಿಗುವಂತಾಗಬೇಕು. ಈ ಬಗ್ಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ಸಂತೋಷ್ ಭಂಡಾರಿ ಚಿಲ್ಮೆತ್ತಾರು ಒತ್ತಾಯಿಸಿದರು. ಅಂಗವಿಕಲ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಪ್ರತಿ ಗ್ರಾಮ ಮಟ್ಟದಲ್ಲಿ ಆಗಬೇಕು, ಪ್ರಸ್ತುತ ಮಂಗಳೂರಿನಲ್ಲಿ ಆಗುತ್ತಿರುವುದರಿಂದ ಅಲ್ಲಿಗೆ ಕರೆದುಕೊಂಡು ಹೋಗಲು ಕಷ್ಟವಾಗುತ್ತಿದೆ ಎಂದು ಶಿಕ್ಷಕ ರಾಮಣ್ಣ ರೈ ತಿಳಿಸಿದರು.
ರಸ್ತೆಬದಿ ವಿದ್ಯುತ್ ಕಂಬ: ಬಹುತೇಕ ಕಡೆ ವಿದ್ಯುತ್ ಕಂಬಗಳನ್ನು ರಸ್ತೆ ಬದಿಯಲ್ಲೆ ಹಾಕುತ್ತಿದ್ದಾರೆ. ಇದು ಸರಿಯಲ್ಲ. ಕನಿಷ್ಟ 3 ಮೀಟರ್ ಅಂತರ ಬಿಟ್ಟು ಕಂಬ ಹಾಕಬೇಕು ಎಂದು ಮಹಮ್ಮದ್ ಬೊಳ್ಳಾಡಿ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ರಾಜೇಶ್ ರೈ ಪರ್ಪುಂಜ ವರ್ಗ ಜಾಗದವರ ಅನುಮತಿ ಪಡೆದುಕೊಂಡೇ ಕಂಬ ಅಳವಡಿಸಬೇಕು ಎಂದರು. ವಿಶ್ವನಾಥ ರೈ ಕೋಡಿಬೈಲ್ ಮಾತನಾಡಿ, ನನ್ನ ಅನುಮತಿ ಇಲ್ಲದೆ ವರ್ಗ ಜಾಗಕ್ಕೆ ಪ್ರವೇಶಿಸಿ ತೋಟದ ಬೇಲಿ ಕತ್ತರಿಸಿ ವಿದ್ಯುತ್ ಸ್ಟೇ ವೈರ್ ಅಳವಡಿಸಲಾಗಿದೆ ಎಂದು ದೂರಿದರು.ಮೆಸ್ಕಾಂ ಎಇಇ ಶಿವಶಂಕರ್ ಪ್ರತಿಕ್ರಿಯಿಸಿ ಸ್ಟೇ ವೈರನ್ನು ತೆಗೆಸಿಕೊಡುವ ಭರವಸೆ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಮಹೇಶ್ ರೈ ಕೇರಿ, ಸಿರಾಜುದ್ದೀನ್ ಕುಂಬ್ರ, ಲತೀಫ್ ಕುಂಬ್ರ, ರೇಖಾ ಯತೀಶ್, ವನಿತಾ ಕುಮಾರಿ, ಚಿತ್ರಾ ಬಿ.ಸಿ., ಸುಂದರಿ, ಶಾರದಾ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ಸ್ವಾಗತಿಸಿ, ಪಂಚಾಯಿತಿ ಮಾಹಿತಿಯೊಂದಿಗೆ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ದಾಖಲಿಸಿಕೊಂಡರು.
ಗ್ರಾಮಸ್ಥರಿಂದ ಹಲವು ಬೇಡಿಕೆ
ಬೆಳಗ್ಗೆ 7.30ರ ಬಳಿಕ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜಿಗೆ ತೆರಳಲು ಬಸ್ಸಿನ ಸಮಸ್ಯೆ ಉಂಟಾಗಿದ್ದು, ಅದನ್ನು ಬಗೆಹರಿಸಬೇಕು. ಪರ್ಪುಂಜದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ತಂಗುದಾಣ ನಿರ್ಮಿಸಬೇಕು. ಗ್ರಾಮಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಬೇಕು, ಕೇರಳ ಮಾದರಿಯಲ್ಲೇ ಕರ್ನಾಟಕದಲ್ಲೂ ಬ್ಯಾಟರಿ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್ನ್ನು ಮೆಸ್ಕಾಂ ನಿರ್ಮಿಸಬೇಕು, ಸರ್ಕಾರಿ ಶಾಲೆ ಜಾಗ ಆಯಾ ಶಾಲೆ ಹೆಸರಿನಲ್ಲೇ ಆರ್ಟಿಸಿ ಆಗಬೇಕು ಮೊದಲಾದ ಬೇಡಿಕೆಗಳನ್ನು ಗ್ರಾಮಸ್ಥರು ಮುಂದಿಟ್ಟರು.