

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಗುಜರಾತ್ ಟೈಟಾನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಿನ 66ನೇ ಐಪಿಎಲ್ ಪಂದ್ಯ ಒಂದು ಎಸೆತ ಕಾಣದೇ ರದ್ದುಗೊಂಡಿದೆ.
ಹೈದರಾಬಾದಿನಲ್ಲಿ ಗುರುವಾರ (ಮೇ 16) ಎಡಬಿಡದೆ ಮಳೆ ಸುರಿದ ಪರಿಣಾಮ ಪಂದ್ಯ ಒಂದು ಎಸೆತ ಕಾಣದೇ ರದ್ದುಗೊಂಡಿದೆ. ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಲಾಗಿದ್ದು, ಈ ಮೂಲಕ ಎಸ್ಆರ್ಎಚ್ ಪ್ಲೇಆಫ್ ಪ್ರವೇಶಿಸಿದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇತ್ತ ಎಸ್ಆರ್ಎಚ್ ಪ್ಲೇಆಫ್ ಪ್ರವೇಶಿಸುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ಜೈಂಟ್ಸ್ ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದ್ದು, ನಾಲ್ಕನೇ ಸ್ಥಾನಕ್ಕಾಗಿ ಆರ್ಸಿಬಿ ಹಾಗೂ ಚೆನ್ನೈ ತಂಡಗಳು ಸೆಣಸಾಡಲಿದೆ. ಈ ಎರಡು ತಂಡಗಳ ಪೈಕಿ, ಮೇ 18ರಂದು ಯಾವ ಟೀಮ್ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಲಿದೆ ಎಂದು ಕಾದು ನೋಡಬೇಕಿದೆ.
ಇದಲ್ಲದೆ ಪಾಯಿಂಟ್ಸ್ ಟೇಬಲ್ನಲ್ಲೂ ಬದಲಾವಣೆ ಆಗುವ ಸಾಧ್ಯತೆಗಳಿದ್ದು, ಮುಂದಿನ ಪಂದ್ಯದಲ್ಲಿ ಆರ್ಆರ್ ಕೋಲ್ಕತ್ತಾ ಎದುರು ಸೋತು, ಎಸ್ಆರ್ಎಚ್ ಪಂಜಾಬ್ ವಿರುದ್ಧ ಭರ್ಜರಿ ಜಯ ಗಳಿಸಿದರೆ ಎರಡನೇ ಸ್ಥಾನಕ್ಕೇರುವ ಅವಕಾಶವನ್ನು ಹೊಂದಿದೆ. ಒಂದು ವೇಳೆ ಆರ್ಆರ್ ಹಾಗೂ ಎಸ್ಆರ್ಎಚ್ ತಮ್ಮ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸೋತರೆ ನಾಲ್ಕನೇ ಸ್ಥಾನದಲ್ಲಿರುವ ತಂಡ ಎರಡನೇ ಪ್ಲೇಸ್ಗೆ ಹೋಗುವ ಅವಕಾಶವನ್ನು ಹೊಂದಿದೆ. ಅಂತಿಮವಾಗಿ ಮೇ 19ರಂದು ಈ ಬಗ್ಗೆ ತಿಳಿಯಲಿದೆ.