

ಚಿತ್ರದುರ್ಗ: 2023ರ ಡಿಸೆಂಬರ್ ತಿಂಗಳಲ್ಲಿ ಇಲ್ಲಿನ ಚಳ್ಳಕೆರೆ ಗೇಟ್ ಬಳಿ ಇರುವ ಜೈಲ್ ರಸ್ತೆಯಲ್ಲಿ ಜಗನ್ನಾಥ ರೆಡ್ಡಿ ಎಂಬುವವರ ಪಾಳುಬಿದ್ದ ಮನೆಯಲ್ಲಿ ಪತ್ತೆಯಾಗಿದ್ದ ಐವರ ಅಸ್ಥಿಪಂಜರ ಪ್ರಕರಣಕ್ಕೆ ಸಂಬಂಧಿಸಿದಂತೆ FSL ವರದಿ ಪೊಲೀಸರ ಕೈ ಸೇರಿದ್ದು, ವರದಿಯಲ್ಲಿ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.
ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧರ್ಮೇಂದರ್ ಕುಮಾರ್, ಅಸ್ಥಿಪಂಜರ ಸಿಕ್ಕ ತಕ್ಷಣ, ಪೂರ್ತಿ ಮನೆ ಅಸ್ತವ್ಯಸ್ತವಾಗಿತ್ತು. ಕೂಡಲೇ FSL ತಂಡವನ್ನು ಕರೆಸಿ ತನಿಖೆಗೆ ಆದೇಶಿಸಲಾಯಿತು. ತನಿಖಾ ತಂಡ ಹಾಗೂ FSL ತಂಡ ಸೇರಿ ಆ ಮನೆಯಿಂದ 71 ಸಾಕ್ಷ್ಯಗಳನ್ನು ಕಲೆ ಹಾಕಲಾಗಿತ್ತು. ಎಲ್ಲಾ ಸ್ಯಾಂಪಲ್ಸ್ಗಳನ್ನು ದಾವಣಗೆರೆ, ಬೆಂಗಳೂರು ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಸೆನ್ಸಿಬಲ್ ಪ್ರಕರಣ ಆಗಿದ್ದರಿಂದ ವರದಿ ಕೈ ಸೇರುವುದು ಸ್ವಲ್ಪ ತಡವಾಯಿತು.
ಮೃತರ ಸಂಬಂಧಿಕ ಪವನ್ ಕುಮಾರ್ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದು ಜಗನ್ನಾಥ ರೆಡ್ಡಿ ಕುಟುಂಬವೇ ಎಂದು ಪವನ್ ದೂರು ನೀಡಿದ್ದರು. FSL ವರದಿಯಲ್ಲಿ ದೇಹಗಳ ಯಾವುದೇ ಭಾಗದಲ್ಲಿ ಗುರುತುಗಳು ಕಂಡು ಬಂದಿಲ್ಲ. ಅಸ್ಥಿಪಂಜರದ ಸ್ಯಾಂಪಲ್ ಗಳಲ್ಲಿ ನಿದ್ದೆ ಮಾತ್ರೆಗಳು ಸೇವನೆ ಮಾಡಿರುವ ಮಾಹಿತಿ ಸಿಕ್ಕಿದೆ. ಐದು ಮಂದಿ ನಿದ್ದೆ ಮಾತ್ರೆ ಸೇವನೆಯಿಂದ ಮೃತಪಟ್ಟಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
FSL ರಿಪೋರ್ಟ್ ಪ್ರಕಾರ ನಿದ್ದೆ ಮಾತ್ರೆ ಸೇವನೆಯಿಂದಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಆದರೆ, ಅಡುಗೆ ಮನೆಯಲ್ಲಿದ್ದ ಎರಡು ಪಾತ್ರಗಳಲ್ಲಿ ಸೈನೈಡ್ ದೊರೆತ್ತಿತ್ತು. ಅಸ್ಥಿಪಂಜರಗಳ ದೇಹದಲ್ಲಿ ಸೈನೈಡ್ ಸೇವನೆ ಮಾಡಿರುವುದು ಕಂಡು ಬಂದಿಲ್ಲ. ಆ ಮನೆಯಲ್ಲಿ ಔಷಧಿಗಳು, ಮಾತ್ರೆಗಳು ಸಿಕ್ಕಿವೆ. ನಮ್ಮ ತನಿಖೆ ಪ್ರಕಾರ ಫೆಬ್ರವರಿ, ಮಾರ್ಚ್ 2019 ರಲ್ಲಿ ಮೃತಪಟ್ಟಿದ್ದಾರೆ. ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಮುಂದುವರೆದ ತನಿಖೆಯನ್ನು CPIಗೆ ಒಪ್ಪಿಸಲಾಗಿದೆ. ಇದು ಸಾವಿಗೆ ಸೂಕ್ತ ಕಾರಣ ಏನು ಎಂಬುದು ಬೆಳಕಿಗೆ ಬರಲಿದೆ. CPI ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ತಿಳಿಸಿದ್ದಾರೆ.
2023 ಡಿ.29 ರಂದು ಚಿತ್ರದುರ್ಗದಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ನಾಥರೆಡ್ಡಿ ಕುಟುಂಬ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತಹತ್ಯೆಗೆ ಶರಣಾಗಿದ್ದಾರೆ ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು. ಬಳಿಕ ಪೊಲೀಸರು ಡೆತ್ ನೋಟ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದರು. ಇದೀಗ ಎಫ್ಎಸ್ಎಲ್ ವರದಿಯಲ್ಲಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾದ ಬಗ್ಗೆ ಉಲ್ಲೇಖಿಸಲಾಗಿದೆ.