

ಮುಂಬೈ: ಬಾಲಿವುಡ್ ತಾರಾಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯವರ ಈ ವಾರಾಂತ್ಯದ ಡಿನ್ನರ್ ಔಟಿಂಗ್ಗೆ ಮತ್ತಷ್ಟು ಮೆರುಗು ಕಟ್ಟಿತ್ತು. ಏಕೆಂದರೆ ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆದ್ದಿರುವ ವಿಶ್ವ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು, ಈ ತಾರಾ ದಂಪತಿಯ ವಿಶೇಷ ಅತಿಥಿಯಾಗಿದ್ದರು.
ಮುಂಬೈನ ವರ್ಲಿಯಲ್ಲಿರುವ ಬಾಸ್ಟಿಯನ್ ಎಂಬ ರೆಸ್ಟೊರೆಂಟಿನಲ್ಲಿ ಶನಿವಾರ ಈ ತಾರೆಗಳ ಸಂಗಮ ಮಾಧ್ಯಮದವರ ಕ್ಯಾಮೆರಾಗಳ ಕಣ್ಣು ಕಟ್ಟಿದ್ದು ವರದಿಯಾಗಿದೆ. ದೀಪಿಕಾ ಬಿಳಿಯ ಟಾಪ್ ಮತ್ತು ಕಪ್ಪು ಪ್ಯಾಂಟ್ಸ್ ಧರಿಸಿದ್ದರೆ, ಸಿಂಧು ಅವರು ಬಿಳಿಯ ಬಣ್ಣದ ಸುಂದರ ಡ್ರೆಸ್ ಧರಿಸಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಡಿನ್ನರ್ನ ನಂತರ ಒಟ್ಟಿಗೆ ನಿಂತು ಫೋಟೋಗೆ ಪೋಸ್ ಮಾಡಿದ ಈರ್ವರೂ ನಾರಿಮಣಿಯರನ್ನು ರಣವೀರ್ ಕಾರುಗಳತ್ತ ಕರೆದೊಯ್ದ ಚಿತ್ರವೂ ವೈರಲ್ ಆಗಿದೆ.
ಈ ಸಂದರ್ಭದ ಸೆಲ್ಫಿಯನ್ನು ರಣವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಚಿತ್ರಕ್ಕೆ 'ಸ್ಮಾಶಿಂಗ್ ಟೈಮ್' ಎಂದು ಕ್ಯಾಪ್ಟನ್ ನೀಡಿದ್ದಾರೆ. ಒಲಿಂಪಿಕ್ಸ್ನಲ್ಲಿ ಎರಡು ಬಾರಿ ಪದಕಗಳನ್ನು ಗೆದ್ದಿರುವ ಭಾರತದ ಏಕೈಕ ಅಥ್ಲೀಟ್ ಆಗಿರುವ ಸಿಂಧು, ಬ್ಯಾಂಡ್ಮಿಂಟನ್ನಲ್ಲಿ 2016 ರ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರೆ, ಇತ್ತೀಚೆಗೆ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದರು.
ರಣವೀರ್ರ ಈ ಪೋಸ್ಟ್ಗೆ ಕಾಮೆಂಟ್ ಮಾಡಿರುವ ಸಿಂಧು, "ರಣವೀರ್-ದೀಪಿಕಾ, ನಿಮ್ಮೊಂದಿಗೆ ಸಮಯ ಕಳೆದದ್ದು ತುಂಬಾ ಚೆನ್ನಾಗಿತ್ತು. ನಿಮ್ಮನ್ನು ಮತ್ತೆ ನೋಡಲು ಕಾತರಳಾಗಿದ್ದೇನೆ" ಎಂದು ಬರೆದಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಇದೇ ಚಿತ್ರವನ್ನು ಶೇರ್ ಮಾಡಿರುವ ಸಿಂಧು, "ನಮ್ಮ ಮುಖದ ಮೇಲಿನ ನಗು ನಾವು ಕಳೆದ ಒಳ್ಳೇ ಸಮಯವನ್ನು ಹೇಳುತ್ತದೆ" ಎಂದು ಟಿಪ್ಪಣಿ ಬರೆದಿದ್ದಾರೆ. (ಏಜೆನ್ಸೀಸ್)