

ಡಬ್ಲಿನ್: ಕ್ರಿಕೆಟ್ ಪಂದ್ಯಗಳ ನಡುವೆ ಅಭಿಮಾನಿಗಳು ಮೈದಾನದೊಳಕ್ಕೆ ಪ್ರವೇಶಿಸಿಬಿಡುವ ಹಲವು ಪ್ರಸಂಗಗಳು ನಡೆಯುತ್ತಿರುತ್ತವೆ. ಈ ಬಾರಿ ನಾಯಿಯೊಂದು ಮೈದಾನಕ್ಕಿಳಿದಿದ್ದು, ಬಾಲ್ಅನ್ನು ಕಚ್ಚಿಕೊಂಡು ಆಟಗಾರರನ್ನು ಬಾಲು ವಾಪಸ್ ಕೊಡಲು ಆಟಾಡಿಸಿದ ಪ್ರಸಂಗ ಐರ್ಲೆಂಡಿನಲ್ಲಿ ನಡೆದಿದೆ. ಈ ನಗೆ ಉಕ್ಕಿಸುವ ದೃಶ್ಯಾವಳಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಐರ್ಲೆಂಡಿನ ಮಗೇರಮೆಸಾನ್ನಲ್ಲಿರುವ ಬ್ರೆಡಿ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಬ್ರೆಡಿ ಮತ್ತು ಸಿಎಸ್ಎನ್ಐ ಮಹಿಳಾ ತಂಡಗಳ ನಡುವೆ ಆಲ್ ಐರ್ಲೆಂಡ್ ಟಿ20 ಕಪ್ ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ಅಬ್ಬಿ ಲೆಖಿ ಚೆಂಡನ್ನು ಆಫ್ಸೈಡ್ ಪ್ರದೇಶಕ್ಕೆ ಹೊಡೆದಾಗ ಫೀಲ್ಡರ್, ರನ್ ಔಟ್ ಮಾಡಲು ವಿಕೆಟ್ ಕೀಪರ್ ರಾಚೆಲ್ ಹೆಪ್ಬರ್ನ್ಗೆ ಚೆಂಡನ್ನು ಪಾಸ್ ಮಾಡಿದರು. ಆದರೆ ಹೆಪ್ಬರ್ನ್ ಅವರು ವಿಕೆಟ್ ಕಡೆ ಎಸೆದ ಬಾಲ್ ವಿಕೆಟ್ಟನ್ನು ಮಿಸ್ ಮಾಡಿ ಆಚೆಗೆ ಹೋಯಿತು. ಆ ಸಮಯಕ್ಕೆ ಕ್ರೀಡಾಂಗಣ ಪ್ರವೇಶಿಸಿದ್ದ ಪುಟಾಣಿ ನಾಯಿಯೊಂದು, ಚೆಂಡನ್ನು ಕಚ್ಚಿಕೊಂಡು ಹೊರಟಿತು. ಆಟ ಸ್ಥಗಿತಗೊಂಡಂತೆ, ಫೀಲ್ಡರ್ಗಳು ಚೆಂಡನ್ನು ವಾಪಸ್ ಪಡೆಯಲು ನಾಯಿಯನ್ನು ಹಿಡಿಯುವ ಪ್ರಯತ್ನ ಆರಂಭಿಸಿದರು.
ತಾನೂ ಚೆಂಡಿನೊಂದಿಗೆ ಆಟವಾಡುವ ತವಕದಿಂದ ಮೈದಾನದ ತುಂಬಾ ಓಡಾಡುತ್ತಿದ್ದ ನಾಯಿಯ ಮಾಲೀಕನಾದ ಬಾಲಕನೊಬ್ಬ ಅದನ್ನು ಹಿಡಿಯಲು ಓಡಿಬಂದ. ಕೊನೆಗೆ, ನಾನ್ ಸ್ಟ್ರೈಕರ್ ಅಯೋಫೆ ಫಿಶರ್ ಬಳಿ ಆ ನಾಯಿ ಚೆಂಡನ್ನು ಬಿಟ್ಟಿತು. ಈ ಪ್ರಸಂಗ ಆಟಗಾರರಲ್ಲಿ ಉಲ್ಲಾಸ ಮೂಡಿಸಿದರೆ, ಪ್ರೇಕ್ಷಕರ ಮೊಗಗಳಲ್ಲಿ ನಗೆ ಅರಳಿತು. (ಏಜೆನ್ಸೀಸ್)