

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ಇಂದು ನಿರಾಕರಿಸಿದೆ. ಇದರಿಂದಾಗಿ ಕವಿ ಮತ್ತು ಚಿತ್ರ ರಚನಾಕಾರ ಜಾವೆದ್ ಅಖ್ತರ್ ದೂರಿನ ಮೇಲೆ ಮುಂಬೈ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸುತ್ತಿರುವ ಕ್ರಿಮಿನಲ್ ಮೊಕದ್ದಮೆಯಲ್ಲಿ ಕಂಗನಾ ವಿಚಾರಣೆಗೆ ಹಾಜರಾಗಬೇಕಾಗಲಿದೆ.
ಟಿ.ವಿ. ಸಂದರ್ಶನವೊಂದರಲ್ಲಿ ಕಂಗನಾ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದರು ಎಂದು ಮಾಜಿ ಸಂಸದರೂ ಆಗಿರುವ ಜಾವೆದ್ ಅಖ್ತರ್ ದೂರು ನೀಡಿದ್ದರು. ಆ ದೂರಿನ ಮೇಲೆ ಮ್ಯಾಜಿಸ್ಟ್ರೇಟರು ಪ್ರಕರಣ ದಾಖಲಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದರು. ಈ ನಿಟ್ಟಿನಲ್ಲಿ ವಿಚಾರಣೆಗಾಗಿ ಕಳೆದ ಸೆಪ್ಟೆಂಬರ್ 1ನೇ ತಾರೀಖು ಕೋರ್ಟಿಗೆ ಕಂಗನಾ ಖುದ್ದು ಹಾಜರಾಗಬೇಕೆಂದು ಮ್ಯಾಜಿಸ್ಟ್ರೇಟರು ಆದೇಶಿಸಿದ್ದರು.
ಹೈಕೋರ್ಟ್ನಲ್ಲಿ ಕಂಗನಾ ಈ ಪ್ರಕರಣದ ದಾಖಲಿಸಿಕೊಂಡ ಮ್ಯಾಜಿಸ್ಟ್ರೇಟರ ಆದೇಶವನ್ನು ಪ್ರಶ್ನಿಸಿದ್ದರಿಂದ ವಿಚಾರಣೆಯನ್ನು ಮುಂದೂಡಲಾಗಿತ್ತು. ಇಂದು ಹೈಕೋರ್ಟ್ ಕಂಗನಾರಿಗೆ ಈ ವಿಚಾರವಾಗಿ ಯಾವುದೇ ರಿಲೀಫ್ ನೀಡಲು ನಿರಾಕರಿಸಿರುವುದರಿಂದ, ಅವರು ಸೆಪ್ಟೆಂಬರ್ 14 ರ ಮಂಗಳವಾರ ನಿಗದಿಯಾಗಿರುವ ವಿಚಾರಣೆಗೆ ಮ್ಯಾಜಿಸ್ಟ್ರೇಟ್ ಕೋರ್ಟ್ನ ಮುಂದೆ ಹಾಜರಾಗಬೇಕಿದೆ. (ಏಜೆನ್ಸೀಸ್)