

ಬೆಂಗಳೂರು: ನಿನ್ನೆ (ಜೂ.19) ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಮಹಿಳಾ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್ ಆಟಗಾರ್ತಿ ಸೃತಿ ಮಂಧಾನ ಬೌಲಿಂಗ್ ದಾಳಿಗೆ ಎದುರಾಳಿ ತತ್ತರಿಸಿದ್ದು, 4 ವಿಕೆಟ್ಗಳ ಅಂತರದಿಂದ ಭಾರತ ದಕ್ಷಿಣಾ ಆಫ್ರಿಕಾ ವಿರುದ್ಧ ಗೆದ್ದು ಸಂಭ್ರಮಿಸಿತು. ಟಾಸ್ ಗೆದ್ದ ಸೌತ್ ಆಫ್ರಿಕಾ ಮಹಿಳೆಯರ ತಂಡ, ಮೊದಲು ಬೌಲಿಂಗ್ ಆಯ್ದುಕೊಂಡು, ಭಾರತಕ್ಕೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣಾ ಆಫ್ರಿಕಾ ತಂಡ, 6 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕುವಲ್ಲಿ ಮಾತ್ರ ಶಕ್ತವಾಯಿತು.
ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದಲ್ಲಿ ಮಿಂಚಿದ ಸೃತಿ ಮಂಧಾನ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸೃತಿ ಬೌಲಿಂಗ್ ವೈಖರಿ ಮಾತ್ರ ಸಖತ್ ವೈರಲ್ ಆಗುತ್ತಿದ್ದು, ಇವರ ಸ್ಪಿನ್ಗೂ ನಂ.18ಗೂ ಸಂಬಂಧವಿದೆ ಎಂದು ಕ್ರಿಕೆಟ್ ಫ್ಯಾನ್ಸ್ ಅಭಿಪ್ರಾಯಿಸಿದ್ದಾರೆ.
15ನೇ ಓವರ್ನಲ್ಲಿ ಬೌಲಿಂಗ್ ಮಾಡಿದ ಸೃತಿ, ಸುನೆ ಲೂಸ್ ಅವರ ವಿಕೆಟ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ಚೊಚ್ಚಲ ವಿಕೆಟ್ ಕಬಳಿಸಿದರು. ಮಂಧಾನ ಅವರ ಸ್ಪಿನ್ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ ಕ್ರಿಕೆಟ್ ಅಭಿಮಾನಿಗಳು, ವಿರಾಟ್ ಕೂಡ ಹೀಗೆ ಬೌಲ್ ಮಾಡುತ್ತಾರೆ. ನೀವು ಕೊಹ್ಲಿ ಅವರನ್ನೇ ಅನುಕರಿಸಿದ್ದೀರಿ ಎಂಬಂತೆ ಇಲ್ಲಿ ಕಾಣಿಸುತ್ತಿದೆ. ನಂ.18ಗೂ ಈ ಬೌಲಿಂಗ್ಗೂ ಸಂಬಂಧವಿದೆ ಎಂದು ಫ್ಯಾನ್ಸ್ ತಮ್ಮ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಮತ್ತೊಮ್ಮೆ ಈ ವಿಷಯದ ಮೂಲಕ ಮುನ್ನೆಲೆಗೆ ತಂದಿದ್ದಾರೆ,(ಏಜೆನ್ಸೀಸ್).