

ಬೆಂಗಳೂರು: 'ಅಯ್ಯೋ ತಗಡೇ' ಎಂಬ ನಟ ದರ್ಶನ್ ಹೇಳಿಕೆಗೆ ಗುರಿಯಾಗಿದ್ದ 'ರಾಬರ್ಟ್' ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಇಂದು ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಪೊಲೀಸರ ಕಸ್ಟಡಿಯಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ಕಡೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಈ ಬಗ್ಗೆ ಹಲವು ವಿಷಯ ಹಂಚಿಕೊಂಡಿದ್ದಾರೆ.
"ಅಂದು ಮೈಸೂರಿನ ಒಂದು ಪ್ರಕರಣವೊಂದರಲ್ಲಿ ನನ್ನನ್ನು ಕೂರಿಸಿ, ಟೇಬಲ್ ಮೇಲೆ ವೆಪನ್ ಇಟ್ಟು ಬೆದರಿಸಿದ್ದರು. ಅವತ್ತು ನನ್ನ ಸುತ್ತಮುತ್ತ ಇದದ್ದು, ಬರೋಬ್ಬರಿ 10ರಿಂದ 20 ಜನರು. ಅಂದು ನಾನು ಸತ್ತು ಬದುಕಿದ್ದೇನೆ. ಆ ಕೇಸ್ನಲ್ಲಿ ನನ್ನನ್ನು ಸಿಲುಕಿಸುವ ಹುನ್ನಾರ ಮಾಡಿದ್ರು. 'ರಾಬರ್ಟ್' ಚಿತ್ರದ ವೇಳೆ ಕೂಡ ಬಹಳ ಹಿಂಸೆ ಕೊಟ್ಟರು" ಎಂದು ಹೇಳಿಕೊಂಡಿದ್ದಾರೆ.
"ಒಬ್ಬ ಅಮಾಯಕನನ್ನು ಮೈಸೂರು ಕೇಸ್ನಲ್ಲಿ ಸಿಲುಕಿಸಲು ಪ್ರಯತ್ನಿಸಿದ್ರು. ಅಂದು ನಾನು ಮನೆಗೆ ಹೋದಾಗ ನನ್ನ ಮಕ್ಕಳು ನನ್ನನ್ನು ತಬ್ಬಿಕೊಂಡು, ಅತ್ತಿದ್ದರು. ಆ ದೃಶ್ಯವನ್ನು ಇಂದಿಗೂ ನನ್ನಿಂದ ಮರೆಯಲು ಸಾಧ್ಯವೇ ಇಲ್ಲ. ನಾನು ಎಲ್ಲಿ ಕೊಡಬೇಕೋ ಅಲ್ಲಿಯೇ ಕೊಡುತ್ತೀನಿ. ಆದ್ರೆ, ಕಾನೂನಿನ ಚೌಕಟ್ಟಿನಲ್ಲಿಯೇ ಕೊಡುತ್ತೀನಿ ಅದು ನಾನು. ನಮ್ಮಪ್ಪ ನನಗೆ ಹೇಳಿಕೊಟ್ಟಿದ್ದು, 'ಕಾಲ ಕಾಯ್ದು, ಬಾಲ ಕುಯ್ಯಬೇಕು" ಅಂತ ಎಂದರು.
"ನಾನು ಕೆಟ್ಟ ಕೆಲಸ ಮಾಡಿದ್ರೆ, ಯಾರಾದ್ರೂ ಸುಮ್ಮನೆ ಬಿಡುತ್ತಾರಾ? ನೀವೆಲ್ಲಾ ಅವತ್ತು ಕ್ಷಮಿಸಿ ಸುಮ್ಮನಾದ ಕಾರಣಕ್ಕೆ ಇವತ್ತು ಇಷ್ಟೆಲ್ಲಾ ಆಗಿದೆ. ಅಂದೇ ಇದೆಲ್ಲವನ್ನೂ ಚಿವುಟಿ ಹಾಕಬೇಕಿತ್ತು. ಈ ಕುರಿತು ಅಂದು ನಾನು, ನಟ ಜಗ್ಗೇಶ್ ಮತ್ತು ಧೃವ ಸರ್ಜಾ ಕುಳಿತು ಚರ್ಚೆ ಮಾಡಿದ್ದೆವು. ಸುದೀಪ್ ಮತ್ತು ಪುನೀತ್ ರಾಜ್ಕುಮಾರ್ ಸರ್ ಕೂಡ ಹಲ್ಲುಕಚ್ಚಿಕೊಂಡು ಸುಮ್ಮನಿದ್ದರು" ಎಂದು ಉಮಾಪತಿ ಸ್ಪೋಟಕ ಸಂಗತಿಯನ್ನು ಇದೀಗ ಎಲ್ಲರ ಮುಂದೆ ಬಹಿರಂಗಪಡಿಸಿದ್ದಾರೆ.