

IPL 2025: ಐಪಿಎಲ್ 18ನೇ ಆವೃತ್ತಿಗೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ. ಮೊದಲ ಹಾಗೂ ಶುಭಾರಂಭ ಪಂದ್ಯ ಕೋಲ್ಕತದ ಈಡೆನ್ ಗಾರ್ಡೆನ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಳೆದ ಬಾರಿಯ ಚಾಂಪಿಯನ್ಸ್ ಕೋಲ್ಕತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿ ಸೆಣಸಲಿವೆ.
ಇನ್ನು ಈ ಬಾರಿಯ ಐಪಿಎಲ್ನ ಶುಭಾರಂಭ ಪಂದ್ಯದಲ್ಲಿ ಕ್ರಿಕೆಟ್ ಫ್ಯಾನ್ಸ್ಗಳ ಕ್ರೇಜ್ ಹೆಚ್ಚಿಸಲು ಮೊದಲಿಗೆ ಕಣಕ್ಕಿಳಿಯಲು ಸಜ್ಜಾಗಿರುವ ಆರ್‌ಸಿಬಿ, ಈ ವರ್ಷವಾದರೂ ತಮ್ಮ ಕಟ್ಟಾ ಅಭಿಮಾನಿಗಳಿಗೆ ಟ್ರೋಫಿ ಗೆದ್ದು ಕೊಡುವ ತವಕ, ಆಸೆಯನ್ನು ಹೊತ್ತಿದೆ. ಬೆಂಗಳೂರು ಅಭಿಮಾನಿಗಳು ಸಹ ತಮ್ಮ ನೆಚ್ಚಿನ ತಂಡ 18ನೇ ಆವೃತ್ತಿಯಲ್ಲಿ ಆದರೂ ಕಪ್ ಗೆದ್ದು ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನಾಳೆಯಿಂದ ನಡೆಯುವ ಪಂದ್ಯಕ್ಕೆ ಇಂದಿನಿಂದಲೇ ಅಭಿಮಾನಿಗಳಿಂದ 'ಈ ಸಲ ಕಪ್ ನಮ್ದೇ' ಎಂಬ ಘೋಷಣೆಗಳು ಮನದೊಳಗೆ ಜೋರಾಗಿವೆ.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ಹಾಗೂ ಪೈಪೋಟಿಯ ವೈರತ್ವ ಹೊಂದಿರುವ ತಂಡಗಳು ಎಂದರೆ ಅದು ಆರ್‌ಸಿಬಿ ಮತ್ತು ಸಿಎಸ್‌ಕೆ. ಈ ಎರಡು ಟೀಮ್ಗಳಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದು, ತಂಡಗಳು ಮುಖಾಮುಖಿ ಸೆಣಸಾಡುವುದನ್ನು ನೋಡಲು ತೀವ್ರ ಕುತೂಹಲ ಹಾಗೂ ಕಾತರ ವ್ಯಕ್ತಪಡಿಸುತ್ತಾರೆ. ಇದು ನಿನ್ನೆ, ಮೊನ್ನೆಯ ಅಭಿಮಾನಿವಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.
2008ರಿಂದ ಆರಂಭಗೊಂಡ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದು ಬಾರಿ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದರೆ, ಆರ್‌ಸಿಬಿ ಮಾತ್ರ ಇಲ್ಲಿಯವರೆಗೂ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಇದು ಫ್ರಾಂಚೈಸಿಯ ಅಭಿಮಾನಿಗಳಲ್ಲಿ ಕಾಡುತ್ತಿರುವ ಬಹು ವರ್ಷಗಳ ವೇದನೆ, ಬೇಸರ ಎಂದರೆ ಖಂಡಿತ ತಪ್ಪಾಗಲಾರದು. ಇತರೆ ತಂಡಗಳಿಗಿಂತ ವಿಭಿನ್ನವಾಗಿ ಹಾಗೂ ಉತ್ತಮ ಪ್ರದರ್ಶನ ನೀಡುವ ಆರ್‌ಸಿಬಿ, ಪಂದ್ಯ ಗೆದ್ದರೂ, ಟ್ರೋಫಿ ಗೆಲ್ಲಲು ಪ್ರತಿಬಾರಿಯೂ ವಿಫಲವಾಗುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲಿಟ್ಟುಕೊಂಡು ಮಾತನಾಡಿರುವ ಮಾಜಿ ಕ್ರಿಕೆಟಿಗ ಶದಾಬ್ ಜಕಾಟಿ, ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ಇರುವ ದೊಡ್ಡ ವ್ಯತ್ಯಾಸವನ್ನು ವಿವರಿಸಿದ್ದಾರೆ.
"ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳ ನಿರ್ವಹಣೆ ಮತ್ತು ಡ್ರೆಸ್ಸಿಂಗ್ ರೂಮ್ ವಾತಾವರಣ ತುಂಬಾ ವಿಭಿನ್ನ. ಆರ್‌ಸಿಬಿ ಮ್ಯಾನೇಜ್ಮೆಂಟ್ನಲ್ಲಿ ಮನೋಭಾವದ ಕೊರೆತೆಯಿದೆ. ಈ ತಂಡದ ಆಟಗಾರರು ಉತ್ತಮರೇ. ಆದರೆ, ಟೀಮ್ ಸ್ಪಿರಿಟ್ ಅನ್ನೋದು ಇರಲ್ಲ. ಆಟಗಾರರು ಪರಸ್ಪರ ಸರಿಯಾಗಿ ಸಂಪರ್ಕ ಸಾಧಿಸಿಲ್ಲ. ಆದರೆ, ಸಿಎಸ್ಕೆಯಲ್ಲಿ ಆ ರೀತಿ ಇಲ್ಲ. ಚೆನ್ನೈ ಟೀಮ್ ಮ್ಯಾನೇಜ್ಮೆಂಟ್ ತುಂಬಾ ಚೆನ್ನಾಗಿದೆ. ಅವರು ತಮ್ಮ ಆಟಗಾರರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ನಾನು ಕಂಡ ವ್ಯತ್ಯಾಸ ಇದು" ಎಂದು ಜಕಾಟಿ ಹೇಳಿದ್ದಾರೆ.
"ಆರ್‌ಸಿಬಿ ಒಂದು ತಂಡವಾಗಿ ಆಡುವುದಿಲ್ಲ. ಬದಲಿಗೆ ಅವರು ಪಂದ್ಯಗಳನ್ನು ಗೆಲ್ಲಲು ಕೇವಲ 2ರಿಂದ 3 ಪ್ರಮುಖ ಆಟಗಾರರ ಮೇಲೆ ಮಾತ್ರ ಹೆಚ್ಚು ಅವಲಂಬಿತವಾಗಿರುತ್ತೆ. ಕ್ರಿಕೆಟ್ ಒಂದು ತಂಡದ ಆಟ. ನೀವು ಟ್ರೋಫಿಗಳನ್ನು ಗೆಲ್ಲಲು ಬಯಸಿದರೆ, ಇಡೀ ತಂಡವು ಒಟ್ಟಾಗಿ ನಿಲ್ಲಬೇಕು, ಆಡಬೇಕು. ಇಬ್ಬರು ಅಥವಾ ಮೂವರು ಆಟಗಾರರು ಮಾತ್ರ ಪಂದ್ಯಾವನ್ನು ಗೆಲ್ಲಿಸಲು ಸಾಧ್ಯವಿಲ್ಲ” ಎಂದರು.
"ಸಿಎಸ್‌ಕೆ ದೇಶಿ ಮತ್ತು ವಿದೇಶಿ ಆಟಗಾರರ ಉತ್ತಮ ಕಾಂಬಿನೇಷನ್ ಹೊಂದಿದೆ. ಇದು ಚೆನ್ನೈ ತಂಡವನ್ನು ಮತ್ತಷ್ಟು ಬಲಿಷ್ಠವನ್ನಾಗಿಸಿದೆ. ಯಾವುದೇ ಟೀಮ್ ಇರಲಿ, ಸರಿಯಾದ ತಂಡ ಸಂಯೋಜನೆ ಹೊಂದಿರುವುದು ಅತಿ ಮುಖ್ಯ. ಆದರೆ, ಆರ್‌ಸಿಬಿಯಲ್ಲಿ, ಅವರು ಸದಾ ಕೇವಲ 2ರಿಂದ 3 ಆಟಗಾರರ ಮೇಲೆ ಮಾತ್ರ ಹೆಚ್ಚು ಕೇಂದ್ರೀಕರಿಸುತ್ತಾರೆ” ಎಂದು ಜಕಾಟಿ ವಿವರಿಸಿದ್ದಾರೆ,(ಏಜೆನ್ಸೀಸ್).