

ಚಿಕ್ಕಬಳ್ಳಾಪುರ: ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಮನವಿ ಮಾಡಿದೆ.
ಈಗಾಗಲೇ ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಪೈಯಲಗುರ್ಕಿ, ಕುರುಬರಹಳ್ಳಿಯಲ್ಲಿ ವಾಂತಿ ಭೇದಿಯಿಂದ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದು ಇದೀಗ ಪರಿಸ್ಥಿತಿ ಹತೋಟಿಗೆ ಬಂದಿದೆ. ಇದರ ನಡುವೆ ಬೇಸಿಗೆಯಲ್ಲಿ ಬರುವ ಕರಳು ಬೇನೆ ಕಾಯಿಲೆ ಮುಂಜಾಗ್ರತ ಕ್ರಮಗಳನ್ನು ಅನುಸರಿಸಲು ಆರೋಗ್ಯ ಇಲಾಖೆಯು ಸಲಹೆ ನೀಡಿದೆ.
ಬೇಸಿಗೆಯಲ್ಲಿ ತಾಪಮಾನ ಹೆಚ್ಚುತ್ತಿರುವುದರಿಂದ ಕರುಳು ಸಂಬಂಧಿ ಕಾಯಿಲೆಗಳು ಹಾಗೂ ಸಾಂಕ್ರಾಮಿಕ ರೋಗಗಳು ಉಲ್ಭಣಗೊಳ್ಳುತ್ತಿವೆ. ಹೀಟ್ ವೇವ್ ಪ್ರಕರಣಗಳು ಗೋಚರಿಸುತ್ತಿವೆ. ಇದಕ್ಕೆ ಶುದ್ದವಾದ ನೀರು, ಉತ್ತಮ ಆಹಾರ ಸೇವನೆ, ಸಮರ್ಪಕ ಸ್ವಚ್ಛತೆ ನಿರ್ವಹಣೆ ಸೇರಿದಂತೆ ಮುಂಜಾಗ್ರತಾ ಕ್ರಮಗಳ ಪಾಲನೆಗೆ ಸೂಚಿಸಿದೆ.
*ನೈರ್ಮಲ್ಯ ಸಮಿತಿಗೆ ಸಹಕಾರ
ನಿರಂತರವಾಗಿ ಗ್ರಾಮ ಆರೋಗ್ಯ ಹಾಗೂ ನೈರ್ಮಲ್ಯ ಸಮಿತಿಯ ಸದಸ್ಯರು ಅರಿವು ಮೂಡಿಸುವ ಕೆಲಸವನ್ನು ಕೈಗೊಳ್ಳುತ್ತಿದ್ದು ಇದರ ನಡುವೆ ಜನರು ಸಹ ಅಗತ್ಯ ಸಹಕಾರ ನೀಡಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಕುಡಿಯುವ ನೀರು, ಕಸದ ರಾಶಿ, ಚರಂಡಿಯ ನೀರು ಒಂದೇ ಕಡೆ ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಸುತ್ತಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದೆ.
ಸೊಪ್ಪು ತರಕಾರಿಗಳನ್ನು ಸ್ವಚ್ಛಗೊಳಿಸಿ, ಚೆನ್ನಾಗಿ ಕುದಿಸಿ, ತಣ್ಣಗಾಗಿಸಿದ ಶುದ್ದವಾದ ನೀರು ಸೇವಿಸಬೇಕು. ಶೌಚಗೃಹವನ್ನು ಬಳಸಿದ ನಂತರ, ಆಹಾರವನ್ನು ತಯಾರಿಸುವ ಮತ್ತು ಸೇವಿಸುವ ಮೊದಲು ಸಾಬೂನಿನಲ್ಲಿ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಮನೆಯ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಇದರ ನಡುವೆ ಅಸುರಕ್ಷಿತವಾಗಿ ತಯಾರಿಸಿದ ಹೊರಗಿನ ಆಹಾರ ಪದಾರ್ಥಗಳನ್ನು ಸೇವಿಸುವ ಮೊದಲು ಎಚ್ಚರವಹಿಸಬೇಕು. ಒಂದು ವೇಳೆ ಬಳಲಿಕೆ ಕಂಡು ಬಂದಲ್ಲಿ ಒಆರ್ಎಸ್, ಉಪ್ಪು ಬೆರೆಸಿದ ನಿಂಬೆ ಪಾನಕ, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂದು ತಿಳಿಸಿದೆ.