

ನವದೆಹಲಿ: ಭಾರತದ ಸ್ಟಾರ್ ಷಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಕೆ.ಶ್ರೀಕಾಂತ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಕನಸು ಅಧಿಕೃತವಾಗಿ ಭಗ್ನಗೊಂಡಿದೆ. ಕರೊನಾ ವೈರಸ್ ಹಾವಳಿಯಿಂದಾಗಿ ಒಲಿಂಪಿಕ್ಸ್ ಅರ್ಹತಾ ಬ್ಯಾಡ್ಮಿಂಟನ್ ಟೂರ್ನಿಗಳನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಭಾರತದ ಸ್ಟಾರ್ ಷಟ್ಲರ್‌ಗಳು ನಿರಾಸೆ ಎದುರಿಸಿದ್ದಾರೆ. ರದ್ದುಗೊಂಡಿರುವ ಇಂಡಿಯಾ ಓಪನ್, ಮಲೇಷ್ಯಾ ಓಪನ್ ಮತ್ತು ಸಿಂಗಾಪುರ ಓಪನ್ ಟೂರ್ನಿಗಳನ್ನು ಮರುನಿಗದಿಗೊಳಿಸುವುದಿಲ್ಲ ಮತ್ತು ಅರ್ಹತಾ ಸುತ್ತಿನಲ್ಲಿ ಬೇರಾವುದೇ ಟೂರ್ನಿಗಳಿರುವುದಿಲ್ಲ ಎಂದು ಬಿಡಬ್ಲ್ಯುಎಫ್ ಶುಕ್ರವಾರ ಖಚಿತಪಡಿಸಿದೆ.
ಒಲಿಂಪಿಕ್ಸ್ ಅರ್ಹತಾ ನಿಯಮದ ಅನ್ವಯ ರೋಡ್ ಟು ಟೋಕಿಯೊ ಅಂಕಪಟ್ಟಿಯಲ್ಲಿ ಜೂನ್ 15ರ ವೇಳೆಗೆ ಅಗ್ರ 16 ಸ್ಥಾನದಲ್ಲಿರುವವರಿಗೆ ಮಾತ್ರ ಅರ್ಹತೆ ಸಿಗಲಿದೆ. ಆದರೆ ಸೈನಾ, ಶ್ರೀಕಾಂತ್ ಅಗ್ರ 16ಕ್ಕಿಂತ ಕೆಳಗಿನ ಸ್ಥಾನದಲ್ಲಿದ್ದು, ಇದನ್ನು ಸುಧಾರಿಸಿಕೊಳ್ಳಲೂ ಈಗ ಅವರಿಗೆ ಅವಕಾಶ ಇಲ್ಲದಂತಾಗಿದೆ.
ಇದರಿಂದಾಗಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು, ಬಿ ಸಾಯಿ ಪ್ರಣೀತ್, ಪುರುಷರ ಡಬಲ್ಸ್ ವಿಭಾಗದಲ್ಲಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ಮಾತ್ರ ಭಾರತದಿಂದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಷಟ್ಲರ್‌ಗಳೆನಿಸಿದ್ದಾರೆ.