

ಬೆಲ್‌ಗ್ರೇಡ್: ಕ್ರೀಡಾಪಟುಗಳಿಗೆ ಮೈದಾನದಲ್ಲಿ ಅಭಿಮಾನಿಗಳು ಇದ್ದರಷ್ಟೇ ರಸದೌತಣ. ಮೈದಾನ, ಸ್ಟೇಡಿಯಂಗಳಲ್ಲಿ ಅಭಿಮಾನಿಗಳು ನೆರೆದಿದ್ದರೆ ಕ್ರೀಡಾಪಟುಗಳ ಜೋಶ್ ಹೇಳತೀರದು. ಇದೀಗ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರೇಕ್ಷಕರ ರಹಿತವಾಗಿ ಆಯೋಜಿಸಲು ಆಯೋಜಕರು ಚಿಂತನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ವಿಶ್ವ ನಂ.1 ಟೆನಿಸ್ ಆಟಗಾರ ನೊವಾಕ್ ಜೋಕೊವಿಕ್, ಒಂದು ವೇಳೆ ಪ್ರೇಕ್ಷಕರನ್ನು ಕ್ರೀಡಾಕೂಟಕ್ಕೆ ನಿಷೇಧಿಸಿದರೆ ತಾವೂ ಕೂಡ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.
ಅಭಿಮಾನಿಗಳಿಗೆ ಕ್ರೀಡಾಕೂಟ ಆಯೋಜಿಸಲು ಅನುಮತಿ ನೀಡಿದರಷ್ಟೇ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದಾಗಿ ಜೋಕೋ ಹೇಳಿದ್ದಾರೆ. ಜೋಕೊವಿಕ್‌ಗೂ ಮೊದಲು ರಾಫೆಲ್ ನಡಾನ್ ಹಾಗೂ ಸೆರೇನಾ ವಿಲಿಯಮ್ಸ್ ಕೂಡ ಇದೇ ರೀತಿ ಹೇಳಿದ್ದಾರೆ. ಅಲ್ಲದೆ, ರೋಜರ್ ಫೆಡರರ್ ಕೂಡ ಪ್ರೇಕ್ಷಕರಿಲ್ಲದೆ ಆಡುವುದು ಕಷ್ಟಕರ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ನನಗೆ ಎರಡು ಮನಸ್ಸು ಇದೆ ಎಂದು ಹೇಳಿದ್ದರು.
ಜಪಾನ್ ವೈದ್ಯಕೀಯ ತಂಡವೊಂದು ಕ್ರೀಡಾಕೂಟ ಆಯೋಜನೆ ಕಷ್ಟಕರ ಎಂದು ಹೇಳಿದೆ. ಟೋಕಿಯೊ ನಗರವನ್ನೇ ತುರ್ತುಸ್ಥಿತಿ ಎಂದು ಪರಿಗಣಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರೇಕ್ಷಕರ ರಹಿತವಾಗಿ ಕ್ರೀಡಾಕೂಟ ಆಯೋಜಿಸುವುದೇ ಉತ್ತಮ ಎಂದು ಟೋಕಿಯೊ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥ ಹರಾವೊ ಒಜಾಕಿ ಹೇಳಿದ್ದರು.