

Rishabh Pant: ಕಳೆದ ವರ್ಷ ನವೆಂಬರ್ನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 10 ಬಲಿಷ್ಠ ತಂಡಗಳ ನಡುವೆ ಭರ್ಜರಿ ಬಿಡ್ಡಿಂಗ್ ನಡೆಯಿತು. ಸ್ಟಾರ್ ಹಾಗೂ ಯುವ ಆಟಗಾರರನ್ನೇ ತಮ್ಮ ತಂಡಕ್ಕೆ ಖರೀದಿ ಮಾಡುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮಿಂಚಿದವು. ಇನ್ನು ಉಳಿದ ಫ್ರಾಂಚೈಸಿಗಳು ಕೂಡ ಉತ್ತಮ ಖರೀದಿ ಮಾಡಿತು. ಬರೋಬ್ಬರಿ 27 ಕೋಟಿ ರೂ.ಗೆ ಡೆಲ್ಲಿ ಡ್ಯಾಶರ್ ರಿಷಭ್ ಪಂತ್ರನ್ನು ಖರೀದಿಸಿದ ಲಖನೌ ಸೂಪರ್ ಜೈಂಟ್ಸ್ ಮಾಲೀಕ, ಇದೀಗ ಪಂತ್ಗೆ ತಂಡದ ನಾಯಕನ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದಾರೆ.
ಎಲ್ಎಸ್ಜಿ ತಂಡದ ಜೆರ್ಸಿಯನ್ನು ರಿವೀಲ್ ಮಾಡಿದ ಮಾಲೀಕರು, ರಿಷಭ್ ಪಂತ್ಗೆ ಲಖನೌ ಸೂಪರ್ ಜೈಂಟ್ಸ್ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಐಪಿಎಲ್ 2025ರಲ್ಲಿ ಎಲ್ಎಸ್ಜಿ ಕ್ಯಾಪ್ಟನ್ ಆಗಿ ಕಣಕ್ಕಿಳಿಯಲಿರುವ ರಿಷಭ್ ಮೇಲೆ ಮಾಲೀಕರು ಭಾರೀ ನಿರೀಕ್ಷೆ ಹಾಗೂ ಭರವಸೆಗಳನ್ನು ಹೇರಿದ್ದಾರೆ. ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ಪಂತ್, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಟಿ20 ಲೀಗ್ಗಳಲ್ಲಿಯೂ ಅವರ ಅಬ್ಬರ ಜೋರಾಗಿರಲಿದೆ. ರಿಷಭ್ ಎಲ್ಎಸ್ಜಿ ಮಾಡಿಕೊಂಡ ಅತ್ಯುತ್ತಮ ಆಯ್ಕೆ ಎಂದು ಆಸ್ಟ್ರೇಲಿಯಾದ ಮಾಜಿ ಹೆಡ್ ಕೋಚ್ ಜಸ್ಟಿನ್ ಲ್ಯಾಂಗರ್ ಅಭಿಪ್ರಾಯಿಸಿದ್ದಾರೆ.
ಇನ್ನು ಕ್ಯಾಪ್ಟನ್ ಪಂತ್ ಬಗ್ಗೆ ಮನಬಿಚ್ಚಿ ಮಾತನಾಡಿದ ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ, "ಲಖನೌ ಸೂಪರ್ ಜೈಂಟ್ಸ್ನ ಕ್ಯಾಪ್ಟನ್ ರಿಷಭ್ಗೆ ಅಭಿನಂದನೆಗಳು. ಮುಂದಿನ 14ರಿಂದ 15 ವರ್ಷಗಳು ನೀವು ನಮ್ಮ ತಂಡದಲ್ಲಿಯೇ ಆಡಲಿದ್ದೀರಾ ಎಂಬ ಭರವಸೆ ನನಗಿದೆ. ಇದರೊಟ್ಟಿಗೆ ಐದು ಐಪಿಎಲ್ ಟ್ರೋಫಿಯನ್ನು ಗೆಲ್ಲಲಿದ್ದೀರಿ ಎನ್ನುವುದು ನನ್ನ ಆಶಯ. 15 ವರ್ಷಗಳಲ್ಲಿ ನಮ್ಮ ತಂಡದ ಪರವಾಗಿ ನೀವು ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮರಂತೆ ಐದು ಐಪಿಎಲ್ ಪಟ್ಟವನ್ನು ಪಡೆಯಬೇಕು" ಎಂದು ಹೇಳಿದರು. ಸದ್ಯ ಈ ವಿಚಾರ ಜಾಲತಾಣಗಳಲ್ಲಿ ಹರಿದಾಡಿದ್ದು, ಕ್ರಿಕೆಟ್ ಪ್ರಿಯರಿಗಿಂದ ರಿಷಭ್ಗೆ 'ಆಲ್ ದಿ ಬೆಸ್ಟ್' ಎಂಬ ಮಾತುಗಳು ಕೇಳಿಬಂದಿವೆ,(ಏಜೆನ್ಸೀಸ್).