

ನವದೆಹಲಿ: ಟೀಮ್ ಇಂಡಿಯಾ ಲೆಜೆಂಡರಿ ಆಟಗಾರ ಗೌತಮ್ ಗಂಭೀರ್ ದಿನದಿಂದ ದಿನಕ್ಕೆ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. 17ನೇ ಆವೃತ್ತಿಯ ಐಪಿಎಲ್ನಲ್ಲಿ ಕೆಕೆಆರ್ ಮೆಂಟರ್ ಆಗಿ ಅಧಿಕಾರವಹಿಸಿಕೊಂಡ ಗೌತಮ್ ಸಂಯೋಜನೆ ಬದಲಿಸುವ ಮೂಲಕ ತಂಡ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಾದ ಬಳಿಕ ಅವರು ಟೀಮ್ ಇಂಡಿಯಾದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದು, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಿಹಿ-ಕಹಿ ಎರಡು ದೊರೆತಿದೆ.
ಜುಲೈ ಅಂತ್ಯದಲ್ಲಿ ಶ್ರೀಲಂಕಾ ವಿರುದ್ದ ಆರಂಭವಾದ ಸರಣಿಯಲ್ಲಿ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗೌತಮ್ ತಮ್ಮ ಕಾರ್ಯತಂತ್ರದ ಮೂಲಕ ಟಿ20 ಸೀರೀಸ್ಅನ್ನು ಗೆಲ್ಲಿಸಿದ್ದರು. ಅದೇ ರೀತಿ ಏಕದಿನ ಸರಣಿಯಲ್ಲಿ ತಂಡವನ್ನು ಗೆಲ್ಲಿಸಲಿದ್ದಾರೆ ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತಾದರೂ ಇಲ್ಲದ ಪ್ರಯೋಗ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ. ಇದೀಗ ಗೌತಮ್ರನ್ನು ಕೋಚ್ ಸ್ಥಾನದಿಂದ ವಜಾ ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದ್ದು, ಅನುಭವಿಗಳನ್ನು ನೇಮಿಸುವಂತೆ ಕ್ರೀಡಾಭಿಮಾನಿಗಳು ಬಿಸಿಸಿಐಗೆ ಒತ್ತಾಯಿಸಿದ್ದಾರೆ.
ಏಕೆಂದರೆ 17ನೇ ಆವೃತ್ತಿಯ ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಆಗಿಸಿದ ಬೆನ್ನಲ್ಲೇ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾದ ಕೋಚ್ ಆಗಿ ನೇಮಕ ಮಾಡಲಾಯಿತು. 2025ರಲ್ಲಿ ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಫ್, 2026ರಲ್ಲಿ ನಡೆಯುವ ಟಿ20 ವಿಶ್ವಕಪ್, 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ತಂಡವನ್ನು ಸಜ್ಜುಗೊಳಿಸಬೇಕಿದೆ. ಗೌತಮ್ ಮುಂದೆ ಬೆಟ್ಟದಷ್ಟು ಸವಾಲಿದ್ದು, ಆರಂಭದಲ್ಲೇ ಎಡವಿರುವುದು ಕ್ರೀಡಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇದಲ್ಲದೆ ವೈಯಕ್ತಿಯವಾಗಿಯೂ ಅವರ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ.
ಏಕೆಂದರೆ ಶ್ರೀಲಂಕಾ ವಿರುದ್ಧ ಭಾರತ ಕಳೆದ 27 ವರ್ಷಗಳಲ್ಲಿ ಯಾವುದೇ ಸರಣಿ ಸೋತಿರಲಿಲ್ಲ. ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಸೋತಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು, ಐಪಿಎಲ್ನಲ್ಲಿ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುವುದೇ ಬೇರೆ, ರಾಷ್ಟ್ರೀಯ ತಂಡದ ಕೋಚ್ ಆಗಿ ಕೆಲಸ ಮಾಡುವುದೇ ಬೇರೆ. ನೀವು ದಯವಿಟ್ಟು ರಾಜೀನಾಮೆ ಕೊಟ್ಟು ಹೊರಟು ಹೋಗಿ, ಇಲ್ಲಾಂದರೆ ಬಿಸಿಸಿಐ ಇವರನ್ನು ತೆಗೆದುಹಾಕುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಒಟ್ಟಿನಲ್ಲಿ ಗೌತಮ್ ಗಂಭೀರ್ ವಿರುದ್ಧ ಕ್ರೀಡಾಭಿಮಾನಿಗಳು ಮುಗಿಬಿದ್ದಿದ್ದು, ಇವರು ಭಾರತ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಿಲ್ಲ ಎಂದು ಹೇಳಿದ್ದಾರೆ. ಈ ಎಲ್ಲಾ ಟೀಕೆಗಳಿಗೆ ಗೌತಿ ಮುಂದಿನ ದಿನಗಳಲ್ಲಿ ಹೇಗೆ ಉತ್ತರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.