ದಯವಿಟ್ಟು ಕ್ಷಮಿಸಿ...ಭಾವುಕ ಸಂದೇಶದೊಂದಿಗೆ ಕುಸ್ತಿಗೆ ನಿವೃತ್ತಿ ಘೋಷಿಸಿದ ವಿನೇಶ್ ಪೋಗಟ್

Vinesh Phogat
Published on

ನವದೆಹಲಿ: 33ನೇ ಆವೃತ್ತಿಯ ಪ್ಯಾರಿಸ್​ ಒಲಿಂಪಿಕ್ಸ್​ ಕ್ರೀಡಾಕೂಟದಿಂದ ಭಾರತದ ಕುಸ್ತಿಪಟು ವಿನೇಶ್​ ಪೋಗಟ್​ ಅವರು ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿಫೈನಲ್​ ಪ್ರವೇಶ ಪಡೆದಿದ್ದರು. ಆದರೆ, ಅನಿರೀಕ್ಷಿತ ಬಳೆವಣಿಗೆಯಲ್ಲಿ ಅವರು ಅನರ್ಹಗೊಂಡ ಪರಿಣಾಮ ಭಾರತದ ಪದಕದ ಆಸೆ ನುಚ್ಚು ನೂರಾಗಿದೆ. ಇದರ ಬೆನ್ನಲ್ಲೇ ಕುಸ್ತಿಗೆ ವಿನೇಶ್​ ಪೋಗಟ್​ ನಿವೃತ್ತ ಘೋಷಿಸಿದ್ದಾರೆ.

ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ವಿನೇಶ್ ಅವರು ಫೈನಲ್​ ಪ್ರವೇಶ ಪಡೆದಿದ್ದರು. ಆದರೆ, ಫೈನಲ್​ಗೂ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದರಿಂದ ವಿನೇಶ್​ ಅವರನ್ನು ಅನರ್ಹಗೊಳಿಸಲಾಗಿದೆ. ಒಂದು ವೇಳೆ ಅರ್ಹತೆ ಪಡೆದಿದ್ದರೆ ಇಂದು ಅಮೆರಿಕದ ಸಾರಾ ಹಿಲ್ಡರ್‌ಬ್ರಾಂಡ್ ವಿರುದ್ಧ ಆಡಬೇಕಿತ್ತು. ಆದರೆ, ಅನರ್ಹಗೊಂಡಿದ್ದರಿಂದ ಪದಕದ ಆಸೆ ಅಂತ್ಯಗೊಂಡಿತು.

ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ವಿನೇಶ್​ ಮಾ, ಕುಸ್ತಿ ಗೆದ್ದಿದೆ, ನಾನು ಸೋತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ, ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ, ಎಲ್ಲವೂ ಮುರಿದುಹೋಗಿವೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್​ ಬೈ ಕುಸ್ತಿ (2001-2024) ನಿಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ. ನನ್ನನು ಕ್ಷಮಿಸು ಎಂದು ಭಾವುಕವಾಗಿ ಟ್ವೀಟ್​ ಮಾಡುವ ಮೂಲಕ ನಿವೃತ್ತಿ ಘೋಷಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಅಮೆರಿಕದ ಸಾರಾ ಹಿಲ್ಡರ್‌ಬ್ರಾಂಡ್ ವಿರುದ್ಧ ಫೈನಲ್​ನಲ್ಲಿ ವಿನೇಶ್​ ಸೆಣಸಾಡಬೇಕಿತ್ತು. ಆದರೆ, ಅನರ್ಹಗೊಂಡಿರುವುದು ಭಾರತೀಯರಿಗೆ ಆಘಾತ ಉಂಟುಮಾಡಿದೆ. ಹರಿಯಾಣದ 29 ವರ್ಷದ ವಿನೇಶ್ ಪೋಗಟ್ ಮಂಗಳವಾರ (ಆ.6) ರಾತ್ರಿ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನಿಲಿಸ್ ಗುಜ್ಮನ್ ಲೋಪೆಜ್ ವಿರುದ್ಧ 5-0 ಅಂಕಗಳಿಂದ ಸುಲಭ ಗೆಲುವು ದಾಖಲಿಸಿ ಫೈನಲ್​ಗೆ ಲಗ್ಗೆ ಇಟ್ಟಿದ್ದರು. ಈ ಮುನ್ನ 2016ರ ರಿಯೋ ಒಲಿಂಪಿಕ್ಸ್​ನಲ್ಲಿ 48 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಣಕ್ಕಿಳಿದ ವಿನೇಶ್, ಕ್ವಾರ್ಟರ್​ಫೈನಲ್​ನಲ್ಲಿ ಗಾಯಕ್ಕೆ ತುತ್ತಾಗಿ ಪಂದ್ಯವನ್ನು ಅರ್ಧಕ್ಕೆ ತ್ಯಜಿಸಿದ್ದರು. 2021ರ ಟೋಕಿಯೊ ಗೇಮ್ಸ್​ನಲ್ಲಿ 53 ಕೆಜಿ ವಿಭಾಗದಲ್ಲಿ ಆಡಿದಾಗಲೂ ಎಂಟರ ಘಟ್ಟದಲ್ಲಿ ವಿನೇಶ್ ಪದಕದ ಕಸನು ಭಗ್ನಗೊಂಡಿತು

ವಿನೇಶ್ ನೀವು ಚಾಂಪಿಯನ್ ಆಫ್ ಚಾಂಪಿಯನ್. ದೇಶಕ್ಕೆ ಹೆಮ್ಮೆಯ ಚಿಲುಮೆ. ನೀವು ಪ್ರತಿಯೊಬ್ಬ ಭಾರತೀಯನಿಗೂ ಸ್ಪೂರ್ತಿ. ಒಲಿಂಪಿಕ್ಸ್‌ನಿಂದ ನಿಮ್ಮ ಅನರ್ಹತೆ ನಮಗೆ ತುಂಬಾ ದುಃಖ ತಂದಿದೆ. ನಿಮ್ಮ ನಿರಾಶೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಸವಾಲುಗಳನ್ನು ಎದುರಿಸಿ ಹೋರಾಡುವುದು ನಿಮ್ಮ ಸ್ವಭಾವ. ಮತ್ತೆ ಗೆಲುವಿನತ್ತ ಸಾಗಬೇಕು ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿ ಸಂತೈಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net