

ನವದೆಹಲಿ: ಬಾಂಗ್ಲಾದೇಶ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡಿದ್ದ ಸೈನಿಕರ ಕುಟುಂಬಗಳಿಗೆ ಉದ್ಯೋನಗದಲ್ಲಿ ಮೀಸಲಾತಿ ಖಂಡಿಸಿ ದೇಶಾದ್ಯಂತ ನಡೆದ ವ್ಯಾಪಕ ಹಿಂಸಾಚಾರ ಹಾಗೂ ಪ್ರತಿಭಟನೆಯಲ್ಲಿ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದಾರೆ.
ಇದೀಗ ಇಡೀ ದೇಶ ಮಿಲಿಟರಿ ಆಡಳಿತದಲ್ಲಿದ್ದು, ಮಧ್ಯಂತರ ಅಥವಾ ಪ್ರಜಾಸತ್ತಾತ್ಮಕವಲ್ಲದ ಸರ್ಕಾರ ರಚನೆಗೆ ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ ಪಾಕಿಸ್ತಾನ ಪ್ರತಿಕ್ರಿಯಿಸಿದ್ದು, ಬಾಂಗ್ಲಾದೇಶದ ಜನರೊಂದಿಗೆ ನಿಲ್ಲುವುದಾಗಿ ತಿಳಿಸಿದೆ. ಈ ಕುರಿತು ಪ್ರಕಟಣೆಯನ್ನು ಹೊರಡಿಸಿದೆ.
ಬಾಂಗ್ಲಾದೇಶದಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆಯೂ, ನಾವು ಬಾಂಗ್ಲಾದೇಶ ಜನರೊಂದಿಗೆ ಒಗ್ಗಟ್ಟಾಗಿ ನಿಲ್ಲುತ್ತೇವೆ. ಬಾಂಗ್ಲಾದೇಶದ ಜನರ ಚೈತನ್ಯ ಮತ್ತು ಏಕತೆ ಅವರನ್ನು ಸಾಮರಸ್ಯದ ಭವಿಷ್ಯದತ್ತ ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬಾಂಗ್ಲಾದೇಶವು 1971ರಲ್ಲಿ ಸ್ವಾತಂತ್ರ್ಯವನ್ನು ಪಡೆದಾಗಿನಿಂದ ಪಾಕಿಸ್ತಾನವು ನಿರಂತರವಾಗಿ ಬಾಂಗ್ಲಾವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಇತ್ತೀಚಿನ ದಂಗೆಯಲ್ಲಿ ಐಎಸ್ಐ ಕೂಡ ಒಂದು ಪಾತ್ರವನ್ನು ವಹಿಸಿದೆ ಎನ್ನಲಾಗಿದೆ. ಈ ಪ್ರತಿಭಟನೆಯ ಹಿಂದೆ ಉಗ್ರರ ಕೈವಾಡದ ಜತೆಗೆ ಕೆಲ ಎನ್‌ಜಿಒಗಳು ಸಹ ಪಾತ್ರವೂ ಇದೆ. ಐಎಸ್‌ಐನಿಂದ ಈ ಪ್ರತಿಭಟನೆಗೆ ಹಣದ ನೆರವು ಸಿಕ್ಕಿದೆ ಎಂಬ ಮಾಹಿತಿ ಇದೆ.
ವಾಕಾರ್-ಉಜ್-ಜಮಾನ್ ಅವರು ಜೂನ್‌ನಲ್ಲಿ ಬಾಂಗ್ಲಾದೇಶದ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಮುಂದೆ ಮೂರು ವರ್ಷಗಳ ಅಧಿಕಾರಾವಧಿ ಇದೆ. ಆದರೆ, ಕೇವಲ ಆರು ವಾರಗಳಲ್ಲಿ ಅವರು ಪ್ರಜಾಪ್ರಭುತ್ವ ಸರ್ಕಾರವನ್ನು ದೇಶದಿಂದ ಹೊರಹಾಕಿದ್ದಾರೆ. ಇದೀಗ ಬಾಂಗ್ಲಾದೇಶದ ಸೇನಾ ಕ್ರಮಗಳು ಭಾರೀ ಪರಿಶೀಲನೆಗೆ ಒಳಪಟ್ಟಿವೆ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಸೇನೆಯು ಗುಂಡು ಹಾರಿಸಿದ ನಂತರ ದೇಶದಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದ್ದನ್ನು ಮರೆಯುವಂತಿಲ್ಲ.
ಐತಿಹಾಸಿಕವಾಗಿಯು ಬಾಂಗ್ಲಾದೇಶದ ಸೇನಾ ದಾಖಲೆಗಳು ತುಂಬಾ ಆತಂಕಕಾರಿಯಾಗಿದೆ. 1975ರಲ್ಲಿ ಸೈನ್ಯವು ದಂಗೆಯನ್ನು ನಡೆಸಿತು. ಅಂದಿನ ಪ್ರಧಾನ ಮಂತ್ರಿ ಮುಜಿಬುರ್ ರೆಹಮಾನ್ ಅವರ ಸರ್ಕಾರವನ್ನು ಸಹ ಉರುಳಿಸಿತು. ಬಳಿಕ 15 ವರ್ಷಗಳ ಮಿಲಿಟರಿ ಆಡಳಿತಕ್ಕೆ ಈ ಘಟನೆ ಕಾರಣವಾಯಿತು. ಇದೀಗ ಮತ್ತೊಂದು ದಂಗೆ ನಡೆದಿದ್ದು, ಬಾಂಗ್ಲಾದೇಶದಲ್ಲಿ ಸೇನಾ ನಿಯಂತ್ರಣಕ್ಕೆ ಮರಳುವ ಸೂಚನೆ ಸಿಕ್ಕಿದೆ.