ಸೋತಿದ್ದೇವೆ ಎಂದಾಕ್ಷಣ ಪ್ರಪಂಚ... ಏಕದಿನ ಸರಣಿ ಸೋಲಿನ ಬಳಿಕ ರೋಹಿತ್​ ಶರ್ಮ ಹೇಳಿದ್ದಿಷ್ಟು

Rohit Sharma
Published on

ಕೊಲಂಬೊ: ಇಲ್ಲಿನ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ಟೀಮ್​ ಇಂಡಿಯಾ 110 ರನ್​ಗಳ ಸೋಲುಂಡಿದ್ದು, ಆತಿಥೇಯರ ಎದುರು ಭಾರೀ ಮುಖಭಂಗವನ್ನು ಅನುಭವಿಸಿದೆ. ನೂತನ ಕೋಚ್​ ಗೌತಮ್​ ಗಂಭೀರ್​ ಮಾರ್ಗದರ್ಶನದಲ್ಲಿ ಟಿ20 ಸರಣಿಯನ್ನು ಗೆದ್ದು ಬೀಗಿದ್ದ ಭಾರತ ತಂಡವು ಏಕದಿನದಲ್ಲಿ ಹೀನಾಯವಾಗಿ ಸೋಲುಂಡಿದ್ದು, ಪ್ರವಾಸಿ ತಂಡದ ಪ್ರದರ್ಶನಕ್ಕೆ ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ.

ಸ್ಪಿನ್​ ಸ್ನೇಹಿ ಪಿಚ್​ನಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ ತಂಡವು ಆರಂಭಿಕರಾದ ಆವಿಷ್ಕಾ ಫರ್ನಾಂಡೋ (96 ರನ್, 102 ಎಸೆತ, 9 ಬೌಂಡರಿ, 2 ಸಿಕ್ಸರ್), ಕುಶಾಲ್​ ಮೆಂಡಿಸ್​ (59 ರನ್, 82 ಎಸೆತ, 4 ಬೌಂಡರಿ) ನೆರವಿನಿಂದ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 248 ಗಳಿಸಿತು. ಗುರಿಯನ್ನು ಬೆನ್ನತ್ತಿ ಗೆಲ್ಲುವ ವಿಶ್ವಾಸದೊಂದಿಗೆ ಬ್ಯಾಟಿಂಗ್​ ಆರಂಭಿಸಿದ ಭಾರತದ ಬ್ಯಾಟ್ಸ್​ಮನ್​ಗಳನ್ನು ಇನ್ನಿಲ್ಲದಂತೆ ಕಾಡಿದ ಶ್ರೀಲಂಕಾದ ಬೌಲರ್​ಗಳು ಪ್ರವಾಸಿಗರನ್ನು 26.1 ಓವರ್​ಗಳಲ್ಲಿ 138 ರನ್​ಗಳಿಗೆ ಆಲೌಟ್​ ಮಾಡುವ ಮೂಲಕ ತಂಡಕ್ಕೆ ಸರಣಿಯನ್ನು ದಕ್ಕಿಸಿದರು. ಈ ಮೂಲಕ ಮೂಲಕ ಶ್ರೀಲಂಕಾ ತಂಡವು ಟಿ20 ಸರಣಿಯ ಸೋಲಿನ ಸೇಡನ್ನು ಏಕದಿನದಲ್ಲಿ ತೀರಿಸಿಕೊಳ್ಳುವ ಮೂಲಕ ಭಾರತಕ್ಕೆ ದಿಟ್ಟ ತಿರುಗೇಟು ನೀಡಿದೆ.

team

ಏಕದಿನ ಸರಣಿಯ ಸೋಲಿನ ಕುರಿತು ಮಾತನಾಡಿದ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ, ಇದು ಕಾಳಜಿ ಎಂದು ನಾನು ಭಾವಿಸುವುದಿಲ್ಲ. ನಾವು ವೈಯಕ್ತಿಕವಾಗಿ ಮತ್ತು ಆಟದ ಯೋಜನೆಯಾಗಿ ನೋಡಬೇಕಾದ ವಿಷಯವಾಗಿದೆ. ನಾವು ತಂಡಕ್ಕೆ ಆಡುವಾಗ ನಮಗೆ ಎಂದಿಗೂ ತೃಪ್ತಿ ಇರುವುದಿಲ್ಲ. ಆದರೆ, ನಾವು ಉತ್ತಮ ಆಟಕ್ಕೆ ಮನ್ನಣೆ ನೀಡಬೇಕಿದೆ. ಶ್ರೀಲಂಕಾ ಕ್ರಿಕೆಟ್​ ತಂಡದವರು ಉತ್ತಮವಾಗಿ ಆಡಿದರು ಮತ್ತು ನಾವು ಪರಿಸ್ಥಿತಿಗಳನ್ನು ನೋಡಿ ಸಂಯೋಜನೆಗಳೊಂದಿಗೆ ಹೋಗಿದ್ದೇವೆ.

ನಾವು ಸಕಾರಾತ್ಮಕ ಅಂಶಗಳಿಗಿಂತ ಹೆಚ್ಚಾಗಿ ನೋಡಬೇಕಾದ ಹಲವಾರು ಕ್ಷೇತ್ರಗಳಿವೆ. ತಂಡದಲ್ಲಿ ಕೆಲವು ಬದಲಾವಣೆಗಳಾಗಬೇಕಿದ್ದು, ಕೆಲವೊಮ್ಮ ಈ ರೀತಿಯಾಗುತ್ತದೆ. ಸರಣಿ ಸೋತಿದ್ದೇವೆ ಎಂದಾಕ್ಷಣ ಪ್ರಪಂಚ ಕೊನೆಗೊಂಡಂತಲ್ಲ. ಆದರೆ, ನಾವು ಸೋಲಿನ ನಂತರ ಹೇಗೆ ಕಮ್​ಬ್ಯಾಕ್​ ಮಾಡುತ್ತೀವಿ ಎಂಬುದು ಬಹಳ ಮುಖ್ಯವಾಗುತ್ತದೆ ಎಂದು ಟೀಮ್​ ಇಂಡಿಯಾ ನಾಯಕ ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net