

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದ್ದೇ ತಡ ಪ್ರತಿಯೊಂದು ಪಂದ್ಯವು ರೋಚಕವಾಗಿ ಸಾಗುತ್ತಿವೆ. ಇನ್ನು ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 10ನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಕೆಕೆಆರ್ ಮೊದಲು ಬೌಲಿಂಗ್ ಆಯ್ದುಕೊಂಡಿತು.
ಟಾಸ್ ಸೋತ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿದ್ದು, ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರದಿಂದ 20 ಓವರ್ಗಳಲ್ಲಿ 182 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಸದ್ಯ ಈ ಗುರಿಯನ್ನು ಇದೀಗ ಕೆಕೆಆರ್ ತಲುಪಲು ಹೆಚ್ಚು ಶ್ರಮಿಸಬೇಕಿದೆ. ಎಂದಿನಂತೆ ಓಪನಿಂಗ್ ಮಾಡಿದ ನಾಯಕ ಫಾಫ್ ಡು ಪ್ಲೆಸಿಸ್ ಹೆಚ್ಚಿನ ಸಮಯ ಕ್ರೀಸ್ನಲ್ಲಿ ನಿಲ್ಲದೆ 08 ರನ್ಗೆ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಅವರ ಬೆನ್ನಲ್ಲೇ ಬಂದ ಕ್ಯಾಮರಾನ್ ಗ್ರೀನ್ ಮಿಂಚಿನ ಸಿಕ್ಸರ್ಗಳ ಸಿಡಿಸಿ ಆ್ಯಂಡ್ರೆ ರಸ್ಸಲ್ಗೆ ವಿಕೆಟ್ ಒಪ್ಪಿಸಿದರು.
ಒಂಟಿಯಾಗಿ ಕೆಕೆಆರ್ ಬೌಲರ್ಗಳ ಬೆವರಿಳಿಸಿದ ರನ್ ಮಷಿನ್ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಹೋರಾಟ ನಡೆಸಿದರು. ಸ್ಪೋಟಕ ಬ್ಯಾಟಿಂಗ್ನಿಂದ ಅಬ್ಬರಿಸಿದ ವಿರಾಟ್ 83 ರನ್ಗಳನ್ನು ಸಿಡಿಸಿ ತಂಡಕ್ಕೆ ಆಸರೆಯಾದರು. ಇದರಿಂದ 20 ಓವರ್ಗಳಲ್ಲಿ ಆರ್ಸಿಬಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸುವಲ್ಲಿ ಶಕ್ತವಾಯಿತು. ಇದೀಗ ಈ ಗುರಿಯನ್ನು ಕೆಕೆಆರ್ ಬ್ಯಾಟ್ಸ್ಮನ್ಗಳನ್ನು ತಲುಪುತ್ತಾರಾ? ಅಥವಾ ಆರ್ಸಿಬಿ ವೇಗಿಗಳ ಆರ್ಭಟಕ್ಕೆ ತತ್ತರಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.