

ನವದೆಹಲಿ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧ್ಯಾಯ ಮುಗಿದಿದೆ. ಐಪಿಎಲ್ ಟ್ರೋಫಿ ಗೆಲ್ಲುವ ಅವರ ಕನಸು ಇನ್ನೂ ಒಂದು ವರ್ಷ ಮುಂದೂಡಲ್ಪಟ್ಟಿದೆ. ಈ ಸೀಸನ್‌ನಲ್ಲಿ ಪ್ಲೇ-ಆಫ್ ಪ್ರವೇಶಿಸಿದ ಆರ್‌ಸಿಬಿ, ಎಲಿಮಿನೇಟರ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಮನೆಗೆ ತೆರಳಿತು. ಮೊದಲ 8 ಪಂದ್ಯಗಳಲ್ಲಿ 7 ಸೋಲು ಕಂಡ ಆರ್ಸಿಬಿಗೆ ಪ್ಲೇ ಆಫ್ ತಲುಪುವ ಅವಕಾಶ ಶೇ.1 ರಷ್ಟಿತ್ತು. ಆದರೆ, ಆ ಶೇ.1ನ್ನು 100 ಪರ್ಸೆಂಟ್ ಮಾಡಿ, ಎಲ್ಲರ ನಿರೀಕ್ಷೆಯನ್ನು ತಲೆಕೆಳಗಾಗಿಸಿ ಪ್ಲೇ ಆಫ್ ತಲುಪಿತ್ತು. ಆದರೆ, ಅವರ ಹೋರಾಟ ಎಲಿಮಿನೇಟರ್‌ನಲ್ಲಿ ಕೊನೆಗೊಂಡಿತು.
ಆರ್‌ಸಿಬಿ ಸೋಲಿನ ನೋವನ್ನು ಆ ತಂಡದ ಅಭಿಮಾನಿಗಳು ಆಟಗಾರನೊಬ್ಬನ ಮೇಲೆ ತೋರಿಸುತ್ತಿದ್ದಾರೆ. ಯಾರು ಆ ಆಟಗಾರ ಅಂದರೆ ಗ್ಲೇನ್ ಮ್ಯಾಕ್ಸ್‌ವೆಲ್. ಆರ್‌ಸಿಬಿಯಲ್ಲಿ ಸ್ಟಾರ್ ಆಟಗಾರರಾಗಿದ್ದ ಮ್ಯಾಕ್ಸಿ ಈ ಸೀಸನ್‌ನಲ್ಲಿ ಸಂಪೂರ್ಣ ವಿಫಲರಾದರು. 2021 ರಿಂದ ಆರ್‌ಸಿಬಿ ಜೊತೆಗಿರುವ ಮ್ಯಾಕ್ಸ್‌ವೆಲ್ ಸತತ ಮೂರು ಸೀಸನ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ಆದರೆ, ಏನಾಯಿತೋ ಏನೋ ಈ ಸೀಸನ್‌ನಲ್ಲಿ ಕಳಪೆ ಪ್ರದರ್ಶನ ನೀಡಿದರು. 2021ರ ಸೀಸನ್‌ನಲ್ಲಿ 513 ರನ್, 2022ರಲ್ಲಿ 301 ರನ್, 2023ರಲ್ಲಿ 400 ರನ್ ಗಳಿಸಿದ್ದ ಮ್ಯಾಕ್ಸ್‌ವೆಲ್ ಈ ಋತುವಿನಲ್ಲಿ ಗಳಿಸಿದ್ದು 52 ರನ್ ಮಾತ್ರ. ಮ್ಯಾಕ್ಸ್‌ವೆಲ್‌ನಿಂದ ಇಂತಹ ಕೆಟ್ಟ ಪ್ರದರ್ಶನವನ್ನು ಆರ್‌ಸಿಬಿ ಅಭಿಮಾನಿಗಳು ನಿರೀಕ್ಷಿಸಿರಲಿಲ್ಲ. ಈ ಋತುವಿನಲ್ಲಿ ಒಟ್ಟು 10 ಪಂದ್ಯಗಳನ್ನು ಆಡಿರುವ ಮ್ಯಾಕ್ಸ್‌ವೆಲ್ 5.78ರ ಸರಾಸರಿಯಲ್ಲಿ ಕೇವಲ 52 ರನ್ ಗಳಿಸಿದ್ದಾರೆ. ಇದರಲ್ಲಿ ಒಂದೇ ಒಂದು ಅರ್ಧ ಶತಕವೂ ಇಲ್ಲ.
ಮ್ಯಾಕ್ಸಿಯ ಈ ಅತ್ಯಂತ ಕಳಪೆ ಪ್ರದರ್ಶನವನ್ನು ಆರ್‌ಸಿಬಿ ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಹೀಗಾಗಿಯೇ ಟ್ವಿಟರ್ನಲ್ಲಿ ಮ್ಯಾಕ್ಸ್‌ವೆಲ್ ಟ್ರೆಂಡಿಂಗ್ನಲ್ಲಿದ್ದಾರೆ. ಅದರಲ್ಲೂ ಮ್ಯಾಕ್ಸಿ ಅವರು ಐಪಿಎಲ್ನಲ್ಲಿ ಪಡೆದಿರುವ ಮೊತ್ತಕ್ಕೂ ಮತ್ತು ಅವರು ಗಳಿಸಿರುವ ರನ್‌ಗಳಿಗೆ ಲಿಂಕ್ ಮಾಡಿ ಕೆಟ್ಟದಾಗಿ ಟ್ರೋಲ್ ಮಾಡಲಾಗುತ್ತಿದೆ.
ಮ್ಯಾಕ್ಸ್‌ವೆಲ್ ಆರ್ಸಿಬಿಗೂ ಮೊದಲು ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದರು. ಐಪಿಎಲ್ 2020ರಲ್ಲಿ ಪಂಜಾಬ್ ಅವರನ್ನು ಬಿಡುಗಡೆ ಮಾಡಿತು. ಐಪಿಎಲ್ 2021ರ ಹರಾಜಿನಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ 14.25 ಕೋಟಿ ರೂ.ಗಳಿಗೆ ಹೆಚ್ಚಿನ ಬೆಲೆಗೆ ಖರೀದಿಸಿತು. ಕಳೆದ ನಾಲ್ಕು ವರ್ಷಗಳಿಂದ ಮ್ಯಾಕ್ಸ್‌ವೆಲ್‌ಗೆ ಅದೇ ಮೊತ್ತವನ್ನು ಪಾವತಿಸುತ್ತಿದೆ. ಆದರೆ, ಈ ಸೀಸನ್‌ನಲ್ಲಿ ಮ್ಯಾಕ್ಸ್‌ವೆಲ್ ಗಳಿಸಿದ ರನ್ ಕೇವಲ 52. ಈ 52 ರನ್‌ಗಳಿಗೆ 14.25 ಕೋಟಿ ಪಾವತಿಸಿದಂತಾಗಿದೆ. ಅಂದರೆ ಪ್ರತಿ ರನ್‌ಗೆ ಲೆಕ್ಕ ಹಾಕಿದರೆ, 27 ಲಕ್ಷ ರೂಪಾಯಿ ಆಗುತ್ತದೆ.
ಮ್ಯಾಕ್ಸ್‌ವೆಲ್ ಅವರು ಪ್ರತಿ ರನ್‌ಗೆ ಹೆಚ್ಚು ಹಣ ತೆಗೆದುಕೊಳ್ಳುವ ದುಬಾರಿ ಆಟಗಾರ ಎಂದು ಆರ್‌ಸಿಬಿ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆರ್‌ಸಿಬಿ, ನಿರಂತರ ವಿಕೆಟ್ ಕಳೆದುಕೊಂಡರೂ ರಜತ್ ಪಾಟೀದಾರ್ (34 ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್),ವಿರಾಟ್ ಕೊಹ್ಲಿ (33 ರನ್, 24 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಮಹಿಪಾಲ್ ಲೊಮ್ರೊರ್ (32 ರನ್, 17 ಎಸೆತ, 2 ಬೌಂಡರಿ, 2 ಸಿಕ್ಸರ್) ಸಂಘಟಿತ ಬ್ಯಾಟಿಂಗ್ನೊಂದಿಗೆ 8 ವಿಕೆಟ್ಗೆ 172 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್ (45 ರನ್, 30 ಎಸೆತ, 8 ಬೌಂಡರಿ) ಹಾಗೂ ರಿಯಾನ್ ಪರಾಗ್ (36 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19 ಓವರ್ಗಳಲ್ಲಿ 6 ವಿಕೆಟ್ಗೆ 174 ರನ್ಗಳಿಸಿ ರೋಚಕ ಗೆಲುವು ಕಂಡಿತು. ಸಂಜು ಸ್ಯಾಮ್ಸನ್ ಪಡೆ ಶುಕ್ರವಾರ ನಡೆಯಲಿರುವ ‘ಸೆಮಿಫೈನಲ್’ ಮಾದರಿಯ ಎರಡನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆದಿದ್ದು, ಪ್ರಶಸ್ತಿ ಸುತ್ತಿಗೇರಲು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. (ಏಜೆನ್ಸೀಸ್)