

ಬೆಂಗಳೂರು: ಐಪಿಎಲ್ 17ನೇ ಆವತ್ತಿಯ ಆರಂಭಿಕ ಪಂದ್ಯದಲ್ಲೇ ಸಿಎಸ್ಕೆ ವಿರುದ್ಧ ಹೀನಾಯ ಸೋಲನ್ನು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ನಂತರದಲ್ಲಿ ಎರಡನೇ ಮ್ಯಾಚ್ ಬಿಟ್ಟರೇ ಉಳಿದ ಪಂದ್ಯಗಳಲ್ಲಿ ಸತತ ಸೋಲುಗಳನ್ನು ಅನುಭವಿಸಿ, ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿತ್ತು. ಇದರಿಂದ ತೀವ್ರ ಕಂಗೆಟ್ಟಿದ್ದ ಚಾಲೆಂಜರ್ಸ್ ತಂಡಕ್ಕೆ ಲಕ್ಕಿ ಚಾರ್ಮ್ ಆಗಿ ಎಂಟ್ರಿ ಕೊಟ್ಟ ಸ್ವಪ್ನಿಲ್ ಸಿಂಗ್, ತಮ್ಮ ಉಪಸ್ಥಿತಿಯಲ್ಲಿ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಗೆಲುವನ್ನು ತಂದುಕೊಟ್ಟರು ವಿನಃ ಸೋಲನ್ನು ನೋಡಲು ಬಿಡಲೇ ಇಲ್ಲ. ಇದೊಂದು ರೀತಿ ಆಶ್ಚರ್ಯ ಅನಿಸಿದರೂ ಅಕ್ಷರಶಃ ಸತ್ಯ.
ಕಳೆದ ಆರು ಪಂದ್ಯಗಳಿಂದಲೂ ಸತತ ಗೆಲುವು ನೋಡಿರುವ ಆರ್ಸಿಬಿಗೆ ಸದ್ಯ ಸ್ವಪ್ನಿಲ್ ಸಿಂಗ್ ಅದೃಷ್ಟದ ಉಂಗುರದಂತೆ ಆಗಿದ್ದಾರೆ. ಸ್ವಪ್ನಿಲ್ ತಂಡಕ್ಕೆ ಸೇರ್ಪಡೆಯಾದ ಬಳಿಕ ಆರ್ಸಿಬಿ ಆಡಿದ ಪ್ರತಿ ಪಂದ್ಯವು ಗೆಲುವಿನಲ್ಲೇ ಅಂತ್ಯವಾಗಿದೆ. ಅದೃಷ್ಟವಂತ ಬಂದಿದ್ದೋ ಬಂದಿದ್ದು, ಮತ್ತೆ ಆರ್ಸಿಬಿ ಸೋಲಿನತ್ತ ಮುಖ ಮಾಡಿಲ್ಲ. ಸದ್ಯ ಈ ವಿಷಯ ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲ, ಫ್ರಾಂಚೈಸಿಗೂ ಸಹ ಅತೀವ ಸಂತಸ ತಂದೊಡ್ಡಿದೆ.
ಇನ್ನು ಈ ಬಗ್ಗೆ ಮಾತನಾಡಿದ ಸ್ವಪ್ನಿಲ್ ಸಿಂಗ್, ತನ್ನನ್ನು ಮಿನಿ ಆ್ಯಕ್ಷನ್ನಲ್ಲಿ ಆರ್ಸಿಬಿ ಆಯ್ಕೆ ಮಾಡಿಕೊಂಡಿದ್ದನ್ನು ನೆನೆದು ಭಾವುಕರಾಗಿದ್ದಾರೆ. 33 ವರ್ಷದ ಎಡಗೈ ಸ್ಪಿನ್ನರ್ ಆದ ಸ್ವಪ್ನಿಲ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದೇ ರೋಚಕವಂತೆ. "ಐಪಿಎಲ್ ಆಕ್ಷನ್ ವೇಳೆ ನಾನು ರಣಜಿ ಪಂದ್ಯಕ್ಕಾಗಿ ಡೆಹ್ರಾಡೂನ್ಗೆ ಪ್ರಯಾಣಿಸುತ್ತಿದ್ದೆ. ಆಗ ಸಮಯ ಸಂಜೆ ಸುಮಾರು 7 ಅಥವಾ 8 ಗಂಟೆ ಇರಬಹುದು. ಐಪಿಎಲ್ನ ಅಂತಿಮ ಆಕ್ಷನ್ ಪ್ರಕ್ರಿಯೆ ನಡೆಯುತ್ತಿತ್ತು" ಎಂದರು.
"ಆಗ ನಿರೀಕ್ಷಿಸಿದ್ದು ಏನೇನೂ ಆಗಲಿಲ್ಲ. ಅಂದೇ ನಿರ್ಧರಿಸಿದೆ, ನಾನು ಸುಮ್ಮನೆ ರಣಜಿ ಆಡುವುದು ಒಳ್ಳೆಯದು. ಜೀವನದಲ್ಲಿ ಯಶಸ್ಸು ಸಾಧಿಸಲು ಹಲವಾರು ಮಾರ್ಗಗಳಿವೆ, ಅದರಲ್ಲಿ ಯಾವುದಾದರೂ ಒಂದನ್ನು ಮಾಡೋಣ ಎಂದು ಚಿಂತಿಸಿದ್ದೆ. ಆ ಸಮಯದಲ್ಲಿ ಬಹಳ ಕುಸಿದಿದ್ದೆ. ಆದರೆ, ಯಾವಾಗ ನನಗೆ ಆರ್ಸಿಬಿ ತಂಡದಲ್ಲಿ ಸ್ಥಾನ ಸಿಕ್ಕಿದೆ ಎಂದು ತಿಳಿಯಿತೋ, ಆ ಕೂಡಲೇ ನಾನು ಮತ್ತು ಕುಟುಂಬದವರು ಭಾವುಕರಾದೆವು. ಎಷ್ಟೋ ಜನಕ್ಕೆ ಗೊತ್ತಿಲ್ಲ ನನಗಿದು ನಿಜಕ್ಕೂ ಭಾವುಕ ಪಯಣ ಎಂಬುದು" ಎಂದು ವಿಡಿಯೋ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).