ಟೀಮ್ ಇಂಡಿಯಾ ಮುಖ್ಯ ಕೋಚ್​ ಆಗಿ ಮುಂದುವರೆಯಲ್ಲ ರಾಹುಲ್!​​; ಹಾಗಾದ್ರೆ ದ್ರಾವಿಡ್​ ಸ್ಥಾನಕ್ಕೆ ಯಾರು?

Untitled design (19)
Published on

ನವದೆಹಲಿ: ನವೆಂಬರ್​ 19 ರಂದು ಅಹಮದಾಬಾದ್​ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ವಿಶ್ವಕಪ್​ 2023ರ ಫೈನಲ್​ ಹಣಾಹಣಿಯಲ್ಲಿ ಟೀಮ್​ ಇಂಡಿಯಾ ಸೋಲು ಅನುಭವಿಸುವ ಮೂಲಕ ವಿಶ್ವಕಪ್​ ಪಟ್ಟವನ್ನು ಕಳೆದುಕೊಂಡಿತು.

ಈ ಸಂಗತಿ ಭಾರತೀಯರಿಗೆ ಮತ್ತು ಕ್ರಿಕೆಟ್​ ಅಭಿಮಾನಿಗಳಿಗೆ ಭಾರೀ ದುಃಖವನ್ನು ತಂದೊಡ್ಡಿತು. ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್​ ಆಗಿರುವ ಮಾಜಿ ಕ್ರಿಕೆಟಿಗ ರಾಹುಲ್​ ದ್ರಾವಿಡ್ ಅವರು​ ತರಬೇತುದಾರರಾಗಿ ಮುಂದುವರೆಯುವ ಒಪ್ಪಂದದ ವಿಸ್ತರಣೆಗೆ ಉತ್ಸಾಹ ತೋರದೆ ಇರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಶ್ವಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾದ ಸೋಲಿನ ನಂತರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್​ ದ್ರಾವಿಡ್​ ಮುಂದುವರೆಯದಿರಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಸದ್ಯ ಆಗಾಧ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ.​ ವಿಶ್ವಕಪ್​ನ ಪಂದ್ಯಾವಳಿಗಳು ಸಂಪೂರ್ಣವಾಗಿ ಮುಕ್ತಾಯಗೊಂಡ ಬಳಿಕ ದ್ರಾವಿಡ್ ತಮ್ಮ ಎರಡು ವರ್ಷಗಳ ಒಪ್ಪಂದವನ್ನು ಕೊನೆಗೊಳಿಸಲು ಮುಂದಾಗಿದ್ದಾರೆ.

ಈ ಕುರಿತು ರಾಹುಲ್​ ದ್ರಾವಿಡ್​ ತಮ್ಮ ನಿರ್ಧಾರವನ್ನು ಖುದ್ದಾಗಿ ಬಿಸಿಸಿಐಗೆ ತಿಳಿಸಿರುವುದಾಗಿ ವರದಿಯೊಂದು ಉಲ್ಲೇಖಿಸಿದೆ. ಹಾಗಾದ್ರೆ ರಾಹುಲ್​ ಬದಲಿಗೆ ಮುಂದಿನ ಕೋಚ್​ ಆಗಿ ಯಾರು ಬರಲಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಲಭಿಸಿದ್ದು, ಟೀಮ್​ ಇಂಡಿಯಾದ ಮತ್ತೊಬ್ಬ ಮಾಜಿ ಸ್ಟಾರ್​ ಆಟಗಾರರಾದ ವಿವಿಎಸ್ ಲಕ್ಷ್ಮಣ್ ಅವರು ಆಯ್ಕೆಯಾಗಿದ್ದಾರೆ.

ಲಕ್ಷಣ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಸ್ತುತ ಎರಡನೇ ಸರದಿಯ ಭಾರತೀಯ ತಂಡದ ಮುಖ್ಯ ಕೋಚ್ ಆಗಿರುವ ವಿವಿಎಸ್​ ಲಕ್ಷಣ್​ ಅವರು ಈ ಕೆಲಸದ ಕುರಿತಂತೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದು, ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ. ದ್ರಾವಿಡ್ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಮುಂದುವರೆಯಲಿದ್ದು, ಮುಂಬರುವ ಐಪಿಎಲ್ ತಂಡದೊಂದಿಗೆ ಒಪ್ಪಂದಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net