

ನವದೆಹಲಿ: ವಿಶ್ವಕಪ್ ಮುಗಿದ ಬೆನ್ನಲ್ಲೇ ಕ್ರಿಕೆಟ್ ಜಗತ್ತಿನ ದೃಷ್ಟಿ 2024ರ ಐಪಿಎಲ್ ಹರಾಜು ಪ್ರಕ್ರಿಯೆ ಮೇಲೆ ಬೀಳಲಿದೆ. ಡಿಸೆಂಬರ್ 19ಕ್ಕೆ ಇದೇ ಮೊದಲ ಬಾರಿಗೆ ದುಬೈನಲ್ಲಿ ಐಪಿಎಲ್ ಹರಾಜು ನಡೆಯಲಿದ್ದು, ನ್ಯೂಜಿಲೆಂಡ್ ತಂಡದ ಸೆನ್ಸೇಷನಲ್ ಬ್ಯಾಟ್ಸ್ಮನ್ ಹಾಗೂ ಕನ್ನಡಿಗ ರಚಿನ್ ರವೀಂದ್ರ ಇದೀಗ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಪ್ರಸಕ್ತ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ಪಟ್ಟಿಯಲ್ಲಿ ರಚಿನ್ ಮೊದಲ ಸ್ಥಾನದಲ್ಲಿದ್ದು, ಮುಂಬರುವ ಐಪಿಎಲ್ ಟೂರ್ನಿಯ ತಮ್ಮ ಆದ್ಯತೆಯ ತಂಡದ ಬಗ್ಗೆ ಸುಳಿವು ನೀಡಿದ್ದು, ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ವಿಶ್ವಕಪ್ನಲ್ಲಿ ತಮ್ಮ ಅಮೋಘ ಪ್ರದರ್ಶನದ ಮೂಲಕ ರಚಿನ್ ಎಲ್ಲರ ಮನಸ್ಸನ್ನು ಕದ್ದಿದ್ದಾರೆ. ಕೇವಲ 9 ಪಂದ್ಯಗಳಲ್ಲಿ 3 ಶತಕದೊಂದಿಗೆ 565 ರನ್ ವೈಯಕ್ತಿಕ ರನ್ ಕಲೆಹಾಕುವ ಮೂಲಕ ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿದ್ದಾರೆ. ನಿನ್ನೆ (ನ.09) ಲಂಕಾ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಗೆಲುವು ದಾಖಲಿಸಿ, ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ರಚಿನ್ ಅವರನ್ನು ಆಟವನ್ನು ಮರೆಯುವಂತಿಲ್ಲ. ಕೇವಲ 34 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ನೆರವಿನೊಂದಿಗೆ 42 ರನ್ ಬಾರಿಸುವ ಮೂಲಕ ಮುಂಬರುವ ಐಪಿಎಲ್ ಸೀಸನ್ಗೆ ತಾನೊರ್ವ ಉತ್ತಮ ಆಯ್ಕೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಅಲ್ಲದೆ, ಬಹುತೇಕರ ಕಣ್ಣು ರಚಿನ್ ಮೇಲೂ ಬಿದ್ದಿದೆ.
ನಿನ್ನೆ ಪಂದ್ಯದ ಬಳಿಕ ಮಾತನಾಡಿದ ರಚಿನ್, ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಅಲ್ಲಿ ನೆರೆದಿದ್ದ ಜನತೆಯ ಭಾರೀ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ನನ್ನ ಹೃದಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿಶೇಷ ಸ್ಥಾನವಿದೆ ಎಂದು ಹೇಳಿದರು. ಅಲ್ಲದೆ, ಮುಂಬರುವ ದಿನಗಳಲ್ಲಿ ಇಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇದೇ ಹೇಳಿಕೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ರಚಿನ್ ಸೇರಲಿದ್ದಾರೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಅಲ್ಲದೆ, ಮುಂಬರುವ 2024ರ ಐಪಿಎಲ್ನಲ್ಲಿ ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ ಜತೆ ಆಡುವ ಬಯಕೆಯನ್ನು ರಚಿನ್ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ರಚಿನ್ ಪೋಸ್ಟ್ ಆರ್ಸಿಬಿ ಅಭಿಮಾನಿಗಳ ಮನದಲ್ಲಿ ನಗು ಮೂಡಿಸಿದೆ.
ರಚಿನ್ಗೆ ಬೆಂಗಳೂರಿನ ಮೇಲೇಕೆ ಪ್ರೀತಿ ಅಂದಹಾಗೆ ರಚಿನ್ ರವೀಂದ್ರ ಮೂಲತಃ ಬೆಂಗಳೂರಿನವರು. ಯುವ ಆಲ್ರೌಂಡರ್ ಆಗಿ ನ್ಯೂಜಿಲೆಂಡ್ ತಂಡಕ್ಕೆ ಭರವಸೆ ಮೂಡಿಸಿದ್ದಾರೆ. ರಚಿನ್ ತಂದೆ ರವಿ ಕೃಷ್ಣಮೂರ್ತಿ ಟೆಕ್ಕಿ ಆಗಿದ್ದು, 1990ರಲ್ಲಿ ನ್ಯೂಜಿಲೆಂಡ್ಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಕ್ಲಬ್ ಪರ ಕ್ರಿಕೆಟ್ ಆಡಿದ ಅನುಭವ ಹೊಂದಿರುವ ರವಿ ಕೃಷ್ಣಮೂರ್ತಿ, ರಚಿನ್ ಬಾಲ್ಯದ ಕೋಚ್ ಕೂಡ ಆಗಿದ್ದಾರೆ. ಟೀಮ್ ಇಂಡಿಯಾ ದಿಗ್ಗಜರಾದ ಸ‘ಚಿನ್’ ತೆಂಡುಲ್ಕರ್ ಹಾಗೂ ‘ರಾ’ಹುಲ್ ದ್ರಾವಿಡ್ ಹೆಸರು ಸೇರಿಸಿ ರಚಿನ್ ಎಂದು ಹೆಸರಿಡಲಾಗಿದೆ. ರಚಿನ್ ಅವರ ತಾತ ಬಾಲಕೃಷ್ಣ ಅಡಿಗ, ಬೆಂಗಳೂರಿನ ವಿಜಯ ಕಾಲೇಜ್ನಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿದ್ದು, ಪ್ರಸಕ್ತ ಪ್ರಾಂಶುಪಾಲರಾಗಿದ್ದಾರೆ ಮತ್ತು ಕನ್ನಡ ವಿಜ್ಞಾನ ಲೇಖಕರೂ ಆಗಿದ್ದಾರೆ. ಬೆಂಗಳೂರು ದಕ್ಷಿಣ ಜಯನಗರದಲ್ಲಿ ಅವರ ಕುಟುಂಬಸ್ಥರು ನೆಲೆಸಿದ್ದಾರೆ ಎನ್ನಲಾಗಿದೆ.
ರಚಿನ್ ತಂದೆ ಕ್ರಿಕೆಟ್ ಹಿನ್ನೆಲೆಯುಳ್ಳವರಾಗಿದ್ದರಿಂದ ಚಿಕ್ಕ ವಯಸ್ಸಿನಲ್ಲೇ ರಚಿನ್ ಕ್ರಿಕೆಟ್ ಪ್ರಯಾಣವನ್ನು ಆರಂಭಿಸಿದರು. 2016 ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್ ಅಂಡರ್-19 ತಂಡವನ್ನು ರಚಿನ್ ಪ್ರತಿನಿಧಿಸಿದ್ದಾರೆ. 2018ರ ಅಂಡರ್-19 ತಂಡದಲ್ಲೂ ಆಡಿದ್ದಾರೆ. 2021ರಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ಪಂದ್ಯಕ್ಕೆ ರಚಿನ್ ಪದಾರ್ಪಣೆ ಮಾಡಿದರು. ಇದಾದ ಕೂಡಲೇ ಟೆಸ್ಟ್ ಮಾದರಿ ಪಂದ್ಯವನ್ನು ಪ್ರವೇಶಿಸಿದ ರಚಿನ್, 2023ರಲ್ಲಿ ಏಕದಿನ ತಂಡವನ್ನು ಸೇರಿದರು. (ಏಜೆನ್ಸೀಸ್)