

ನವದೆಹಲಿ: ಆತಿಥೇಯ ಜಿಂಬಾಬ್ವೆ ವಿರುದ್ಧ ಗುರುವಾರ ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಜಯ ದಾಖಲಿಸುವ ಕೆ.ಎಲ್. ರಾಹುಲ್ ಟೀಮ್ ಇಂಡಿಯಾದ ನಾಯಕನಾಗಿ ತಮ್ಮ ಮೊದಲ ಗೆಲುವನ್ನು ದಾಖಲಿಸಿದ್ದಾರೆ.
ರಾಹುಲ್ ಅವರು 2022ರ ಐಪಿಎಲ್ ಬಳಿಕ, ದೀರ್ಘ ವಿರಾಮದ ನಂತರ ಮೊದಲ ಬಾರಿಗೆ ಮೈದಾನಕ್ಕೆ ಇಳಿದಿದ್ದಾರೆ. ಆದರೆ, ಗುರುವಾರದ ಪಂದ್ಯದಲ್ಲಿ ರಾಹುಲ್ ಬ್ಯಾಟಿಂಗ್ ಆಡದೇ ಇದ್ದರೂ ಅವರ ನಡವಳಿಕೆಯೊಂದು ಅಭಿಮಾನಿಗಳನ್ನು ಪ್ರಭಾವಿತಗೊಳಸಿದೆ. ಪಂದ್ಯ ಆರಂಭಕ್ಕೂ ತಂತಮ್ಮ ರಾಷ್ಟ್ರಗೀತೆ ಹಾಡಲು ಎರಡು ತಂಡಗಳು ಸಾಲಿನಲ್ಲಿ ನಿಂತಿದ್ದವು. ಈ ವೇಳೆ ರಾಹುಲ್ ಚೂಯಿಂಗ್ ಗಮ್ ಅಗಿಯುತ್ತಿದ್ದರು. ಇನ್ನೇನು ನಮ್ಮ ರಾಷ್ಟ್ರಗೀತೆ ಆರಂಭ ಆಗಬೇಕು ಎನ್ನುವಷ್ಟರಲ್ಲಿ ತಮ್ಮ ಬಾಯಲ್ಲಿದ್ದ ಚೂಯಿಂಗ್ ಗಮ್ ಹೊರ ತೆಗೆದರು.
ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೆ.ಎಲ್. ರಾಹುಲ್ ಅವರ ನಡವಳಿಕೆ ನೋಡಿ ನೆಟ್ಟಿಗರು ಬಹುಪರಾಕ್ ಎನ್ನುತ್ತಿದ್ದಾರೆ. ವಿಡಿಯೋ ನೋಡಿದ ಮೇಲೆ ನಿಮ್ಮ ಮೇಲಿನ ಗೌರವ ದುಪ್ಪಟ್ಟಾಯಿತು. ನಿಮ್ಮ ದೇಶಪ್ರೇಮಕ್ಕೆ ನಮ್ಮ ಸೆಲ್ಯೂಟ್ ಎಂದು ಕ್ರೀಡಾಭಿಮಾನಿಗಳು ವಿಡಿಯೋ ನೋಡಿ ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಗೆದ್ದ ರಾಹುಲ್ ಫೀಲ್ಡಿಂಗ್ ಆಯ್ದುಕೊಂಡರು. ನಿಗದಿತ 50 ಓವರ್ಗಳಲ್ಲಿ ಜಿಂಬಾಬ್ವೆ ತಂಡ 189 ರನ್ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನತ್ತಿದ ಭಾರತ, ಆರಂಭಿಕ ಆಟಗಾರರಾದ ಶುಭ್ಮನ್ ಗಿಲ್ (72 ಎಸೆತಕ್ಕೆ ಅಜೇಯ 82 ರನ್) ಮತ್ತು ಶಿಖರ್ ಧವನ್ (113 ಎಸೆತಕ್ಕೆ 81 ರನ್) ಅವರ ಮುರಿಯದ ಜೊತೆಯಾಟದಿಂದಾಗಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಸುಲಭವಾಗಿ ಗುರಿ ಮುಟ್ಟಿತು. ಈ ಮೂಲಕ ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎರಡನೇ ಏಕದಿನ ಪಂದ್ಯ ಶನಿವಾರ (ಆ.20) ನಡೆಯಲಿದೆ. (ಏಜೆನ್ಸೀಸ್)