More

    ಆರ್ಥಿಕ ಆಶಾಭಾವ ನೋಂದಣಿ: ಸೋರಿಕೆ ತಡೆಗೆ ಆದ್ಯತೆ, ಇತರ ಮುದ್ರಾಂಕಗಳಿಂದಲೂ ಹಣದ ಹರಿವು

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ನೀಡಿರುವ ವಿನಾಯ್ತಿ ಜತೆಗೆ ಸೋರಿಕೆ ತಡೆಗಟ್ಟಲು ಕೈಗೊಂಡಿರುವ ಅನೇಕ ಸುಧಾರಣಾ ಕ್ರಮಗಳಿಂದಾಗಿ ಮುದ್ರಾಂಕ ಆದಾಯ ಗುರಿಮೀರಿ ಸಂಗ್ರಹವಾಗುತ್ತಿರುವುದು ರಾಜ್ಯ ಸರ್ಕಾರದ ಸಂಪನ್ಮೂಲ ಸಂಗ್ರಹಣೆ ವಿಚಾರದಲ್ಲಿ ಆಶಾಭಾವನೆ ಮೂಡಿಸಿದೆ. ಕಳೆದ ಎರಡು ವರ್ಷ ಕರೊನಾದಿಂದ ಲಾಕ್​ಡೌನ್ ಕಾಡಿದ್ದರೂ ನೋಂದಣಿಯೇನು ಕಡಿಮೆಯಾಗಿಲ್ಲ. ಜತೆಗೆ ಸರ್ಕಾರ ನೀಡಿದ ಕೆಲವೊಂದು ವಿನಾಯ್ತಿ ಹಾಗೂ ಇಲಾಖೆಯಲ್ಲಿ ಕೈಗೊಂಡ ಸುಧಾರಣೆಗಳು ನೋಂದಣಿಯನ್ನು ಹೆಚ್ಚಿಸಿವೆ. ಇದರಿಂದ ನಿರೀಕ್ಷೆಗೂ ಮೀರಿ ಆದಾಯ ಸಂಗ್ರಹಣೆ ಆಗುತ್ತಿದೆ. ಸರ್ವರ್ ಸಮಸ್ಯೆ ಸೇರಿ ಹಲವು ತೊಂದರೆಯಿಂದ ಮುದ್ರಾಂಕ ಮತ್ತು ನೋಂದಣಿ ಇಲಾಖೆ ಬಳಲಿದೆ. ಆದರೂ ನೋಂದಣಿಯ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಸರ್ಕಾರಕ್ಕೆ ಸಂಗ್ರಹವಾಗಿರುವ ತೆರಿಗೆ ಪ್ರಮಾಣವೇ ಇದಕ್ಕೆ ಕನ್ನಡಿ ಹಿಡಿದಿದೆ.

    ಎಷ್ಟಾಗಿದೆ ಸಂಗ್ರಹ?: ರಾಜ್ಯ ಸರ್ಕಾರ ಈ ವರ್ಷ ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ 14 ಸಾವಿರ ಕೋಟಿ ರೂ.ಗಳ ತೆರಿಗೆ ಸಂಗ್ರಹಣೆ ಗುರಿಯನ್ನು ನೀಡಿತ್ತು. ಆದರೆ, ಇಲಾಖೆಯ ಅಧಿಕಾರಿಗಳು ಆಂತರಿಕವಾಗಿ 15,500 ಕೋಟಿ ರೂ.ಗಳ ಸಂಗ್ರಹಣೆ ಮಾಡುವ ಗುರಿ ಹಾಕಿಕೊಂಡಿದ್ದಾರೆ. ಈಗಾಗಲೆ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ 5,600 ಕೋಟಿ ರೂ. ಸಂಗ್ರಹಣೆ ಮಾಡಲಾಗಿದೆ. ಇದರಿಂದಾಗಿ ಗುರಿ ಮೀರಿ ಸಾಧನೆ ಮಾಡುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

    ಸರ್ಕಾರ ಕೊಟ್ಟ ವಿನಾಯ್ತಿ: ಯಾವುದೇ ಆಸ್ತಿ ನೋಂದಣಿಯಾಗುವಾಗ ಮಾರ್ಗಸೂಚಿ ಬೆಲೆಯ ಮೇಲೆ ಮುದ್ರಾಂಕ ಶುಲ್ಕ ನಿಗದಿಯಾಗುತ್ತದೆ. ಕರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಹಾಗೂ ಈ ವರ್ಷದಲ್ಲಿ ಶೇ.10 ವಿನಾಯ್ತಿಯನ್ನು ಸರ್ಕಾರ ಘೋಷಣೆ ಮಾಡಿತ್ತು.

    ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದ್ದು ನೋಂದಣಿ ಪ್ರಮಾಣ ಹೆಚ್ಚಳ ಬಹುದೊಡ್ಡ ಕೊಡುಗೆ ನೀಡಿವೆ. ಕೃಷಿ ಭೂಮಿ ಮಾರಾಟಕ್ಕೆ ಸಂಬಂಧಿಸಿದಂತೆ ನಿಯಮ 79 ಎ ಮತ್ತು ಬಿ ತೆಗೆದು ಹಾಕಲಾಗಿದೆ. ಒಂದು ಕುಟುಂಬಕ್ಕೆ 216 ಎಕರೆ ಭೂಮಿ ಖರೀದಿಗೆ ಅವಕಾಶ ನೀಡಲಾಗಿದೆ. ಜತೆಗೆ ಕೃಷಿ ಭೂಮಿ ಖರೀದಿಗೆ ಇದ್ದ ಆದಾಯದ ಮೀತಿ 25 ಲಕ್ಷ ರೂ. ಇದ್ದದ್ದನ್ನು ತೆಗೆದು ಹಾಕಲಾಗಿದೆ.

    ಇತರ ಮುದ್ರಾಂಕ ಶುಲ್ಕ: ಆಸ್ತಿಗಳ ನೋಂದಣಿಯಲ್ಲದೆ, ಇತರ ಮೂಲಗಳಿಂದ ಬರುವ ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡಲಾಗುತ್ತಿದೆ. ಬಾಡಿಗೆ ಕರಾರು ನೋಂದಣಿ, ಗುತ್ತಿಗೆ ನೋಂದಣಿ, ಸರ್ಕಾರದ ಇಲಾಖೆಗಳಾದ ಲೋಕೋಪಯೋಗಿ, ಕೆಆರ್​ಐಡಿಎಲ್, ಜಲ ಸಂಪನ್ಮೂಲ, ಬಿಬಿಎಂಪಿ, ಜಲಮಂಡಳಿ, ಗ್ರಾಮೀಣಾಭಿವೃದ್ಧಿ ಸೇರಿ ಅನೇಕ ಕಡೆ ನಡೆಯುವ ಒಪ್ಪಂದಗಳ ನೋಂದಣಿಯನ್ನು ಕಡ್ಡಾಯವಾಗಿ ಮಾಡುವ ಮೂಲಕ ಇತರ ಮೂಲಗಳ ಮುದ್ರಾಂಕ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. ಈ ಮೊದಲ ವಾರ್ಷಿಕ 100 ಕೋಟಿ ರೂ. ಇದ್ದ ಇತರ ಮುದ್ರಾಂಕ ಶುಲ್ಕದ ಸಂಗ್ರಹ ಈಗ 250 ಕೋಟಿ ರೂ.ಗೂ ಹೆಚ್ಚಿನ ಸಂಗ್ರಹವಾಗುತ್ತಿದೆ.

    200 ಕೋಟಿ ರೂ. ವಸೂಲಿ: ನೋಂದಣಿ ಸಂದರ್ಭದಲ್ಲಿ ಆಸ್ತಿಯ ಮೌಲ್ಯ ಕಡಿಮೆ ತೋರಿಸಿದ್ದ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚಿ 200 ಕೋಟಿ ರೂ.ಗಳನ್ನು ಈ ವರ್ಷ ವಸೂಲಿ ಮಾಡಲಾಗಿದೆ.

    ಇಲಾಖೆಯಲ್ಲಿ ಕೈಗೊಂಡ ಅನೇಕ ಸುಧಾರಣಾ ಕ್ರಮಗಳಿಂದಾಗಿ ನೋಂದಣಿಯ ಪ್ರಮಾಣ ಹೆಚ್ಚಳ ಸಾಧ್ಯವಾಗಿದೆ. ಸರ್ಕಾರ ಇಲಾಖೆಗೆ ನೀಡಿರುವ ಗುರಿ ಮೀರಿ ಸಾಧನೆ ಮಾಡುತ್ತೇವೆ. ಪ್ರತಿ ನಿತ್ಯ ಪರಿಶೀಲನೆ ಮಾಡುವುದನ್ನು ಕಡ್ಡಾಯ ಮಾಡಿದ್ದೇವೆ. ಅಧಿಕಾರಿಗಳು ಅಂತರ ಜಿಲ್ಲೆಗೆ ಹೋಗಿ ತಪಾಸಣೆ ಮಾಡುವ ಪದ್ಧತಿ ಜಾರಿಗೆ ತರಲಾಗಿದೆ. ಸೋರಿಕೆ ತಡೆಗಟ್ಟಲಾಗಿದೆ.

    | ಡಾ. ಬಿ.ಆರ್. ಮಮತಾ ಮುದ್ರಾಂಕ ಆಯುಕ್ತರು ಹಾಗೂ ನೋಂದಣಿ ಮಹಾ ನಿರ್ದೇಶಕರು

    ಆರ್ಥಿಕ ಆಶಾಭಾವ ನೋಂದಣಿ: ಸೋರಿಕೆ ತಡೆಗೆ ಆದ್ಯತೆ, ಇತರ ಮುದ್ರಾಂಕಗಳಿಂದಲೂ ಹಣದ ಹರಿವುಆರ್ಥಿಕ ಆಶಾಭಾವ ನೋಂದಣಿ: ಸೋರಿಕೆ ತಡೆಗೆ ಆದ್ಯತೆ, ಇತರ ಮುದ್ರಾಂಕಗಳಿಂದಲೂ ಹಣದ ಹರಿವು

    ಸೋರಿಕೆ ತಡೆ ಕ್ರಮಗಳೇನು

    • ಕಡಿಮೆ ಮೌಲ್ಯ ತೋರಿಸಿದರೆ ನೋಂದಣಿ ಆಗದಂತೆ ಸಾಫ್ಟ್​ವೇರ್ ಅಭಿವೃದ್ಧಿ
    • ಮೊದಲೇ ಚಲನ್ ಪಡೆಯುವುದಕ್ಕೆ ಅವಕಾಶ
    • ಡಿಡಿ, ಕ್ರಾಸ್ಡ್ ಚೆಕ್, ನಗದಿಗೆ ಅವಕಾಶವಿಲ್ಲ
    • ಪ್ರತಿ ದಿನ ನೋಂದಣಿಯ ಕಟ್ಟುನಿಟ್ಟಿನ ಪರಿಶೀಲನೆ
    • ಅಧಿಕಾರಿಗಳಿಗೆ ಅಂತರ ಜಿಲ್ಲಾ ಪರಿಶೀಲನೆ ಕಡ್ಡಾಯ
    • ಆಡಿಟ್ ಮಾಡಿಸುವುದು
    • ಕಡಿಮೆ ಮೌಲ್ಯ ತೋರಿಸಿದ್ದವರಿಂದ ಹಣ ವಸೂಲಿ
    • ಕೇಂದ್ರದ ಇ-ಉದ್ಭವಮ್​ನಲ್ಲಿ ಆನ್​ಲೈನ್ ಪಾವತಿಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts