

ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟಿ ಜ್ಯೋತಿ ರೈ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೇಸ್ಬುಕ್, ಟ್ವಿಟರ್ ಹಾಗೂ ಟೆಲಿಗ್ರಾಂ ಸೇರಿದಂತೆ ಜಾಲತಾಣ ವೇದಿಕೆಯಲ್ಲಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೆ ಮಾಡಲಾಗಿದೆ. ಈ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ವತಃ ನಟಿಯೇ ಈ ಬಗ್ಗೆ ಪ್ರತಿಕ್ರಿಯೆ ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ಬೆನ್ನಲ್ಲೇ ಈ ವಿಡಿಯೋಗಳು ಹರಿದಾಡುತ್ತಿದ್ದು, ಕೆಲವರು ಈ ಪ್ರಕರಣಕ್ಕೆ ತಳುಕು ಹಾಕಿದ್ದಾರೆ. ಜ್ಯೋತಿ ರೈ ಆಕ್ಷೇಪಾರ್ಹ ಭಂಗಿಯಲ್ಲಿ ಇರುವ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರ ನಡುವೆ ಇವು ಡೀಪ್‌ಫೇಕ್ ಫೋಟೋಗಳು ಹಾಗೂ ವಿಡಿಯೋಗಳು ಕೂಡ ಆಗಿರಬಹುದು ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿಬಂದಿವೆ.
ಪ್ರಕರಣದ ಬಗ್ಗೆ ಜ್ಯೋತಿ ರೈ ತಿಳಿಸಿದ್ದಿಷ್ಟು:
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಅಶ್ಲೀಲ ವಿಡಿಯೋ ಮತ್ತು ಫೋಟೋಗಳ ಬಗ್ಗೆ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡದ ನಟಿ ಜ್ಯೋತಿ ರೈ, ಕೆಲವು ದಿನಗಳ ಹಿಂದೆಯೇ ಈ ಕುರಿತಂತೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದ್ದಾರೆ ಎಂಬುದು ವರದಿಗಳಿಂದ ತಿಳಿದುಬಂದಿದೆ. "ಕೆಲವೊಂದು ಸಂದೇಶಗಳನ್ನು ಸ್ವೀಕರಿಸುವ ಮೂಲಕ ನಾನು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದೇನೆ. ನನ್ನ ಖ್ಯಾತಿ ಮತ್ತು ನನ್ನ ಕುಟುಂಬದ ಪ್ರತಿಷ್ಠೆ ಅಪಾಯದಲ್ಲಿರುವುದರಿಂದ ಈ ಸಾಮಾಜಿಕ ಬಳಕೆದಾರರು/ವ್ಯಕ್ತಿಗಳ ವಿರುದ್ಧ ಸರಿಯಾದ ಮತ್ತು ತ್ವರಿತ ಕ್ರಮವನ್ನು ತೆಗೆದುಕೊಳ್ಳುವಂತೆ ವಿನಂತಿಸುತ್ತೇನೆ. ಅಲ್ಲದೆ, ಈ ಬಳಕೆದಾರರು/ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ನಾನು ತುಂಬಾ ಹಾನಿ ಅನುಭವಿಸಬೇಕಾಗುತ್ತದೆ. ನಿಮ್ಮ ಪರಿಶೀಲನೆ ಮತ್ತು ತನಿಖೆಗಾಗಿ ನಾನು ಬಳಕೆದಾರರ ಎಲ್ಲ ಐಡಿಗಳ ಟಿಪ್ಪಣಿಯನ್ನು ಲಗತ್ತಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನ ನಂಬರ್‌ಗೆ ಕೆಲ ಮೆಸೇಜ್‌ಗಳು ಕೂಡ ಬಂದಿದ್ದವು ಅದನ್ನು ನೋಡಿ ನನಗೆ ಆಘಾತವಾಗಿದೆ. ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಿ" ಎಂದು ಜ್ಯೋತಿ ರೈ ಮನವಿ ಮಾಡಿದ್ದಾರೆಂದು ಗೊತ್ತಾಗಿದೆ.
ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ನಟಿ ಜ್ಯೋತಿ ರೈ ಫ್ಯಾನ್ಸ್ ಧ್ವನಿ ಎತ್ತಿದ್ದು, ಇನ್ನೊಬ್ಬರ ವೈಯಕ್ತಿಕ ಜೀವನದಲ್ಲಿ ಮೂಗು ತೂರಿಸುವ ಅಧಿಕಾರ ಯಾರಿಗೂ ಇಲ್ಲ. ನಟಿಯ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.